ಲೋಕ ಅದಾಲತ್‌ನಲ್ಲಿ ಒಂದಾದ 7 ಜೋಡಿ

ದಾವಣಗೆರೆಯಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿದ್ದ ಪ್ರಕರಣಗಳ ಸಂಬಂಧ ಒಟ್ಟು 7 ಜೋಡಿಗಳು ರಾಜಿ ಮಾಡಿಕೊಂಡು ಒಂದಾದವು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ವೇಲಾ ಡಿ.ಕೆ, ಇತರ ನ್ಯಾಯಾಧೀಶರು, ವಕೀಲರು ಇದ್ದರು.
ದಾವಣಗೆರೆಯಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿದ್ದ ಪ್ರಕರಣಗಳ ಸಂಬಂಧ ಒಟ್ಟು 7 ಜೋಡಿಗಳು ರಾಜಿ ಮಾಡಿಕೊಂಡು ಒಂದಾದವು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ವೇಲಾ ಡಿ.ಕೆ, ಇತರ ನ್ಯಾಯಾಧೀಶರು, ವಕೀಲರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 5,792 ಪ್ರಕರಣ ಸೌಹಾರ್ದಯುತ ಇತ್ಯರ್ಥ
  • 13.18 ಕೋಟಿ ಪರಿಹಾರ ಪಾವತಿ
ದಾವಣಗೆರೆ : ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಒಟ್ಟು ಪ್ರಕರಣಗಳ ಪೈಕಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 5792 ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲಾಗಿದೆ. 13.18 ಕೋಟಿ ರೂ.ಗಳ ಪರಿಹಾರ ಪಾವತಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ವೇಲಾ ಡಿ.ಕೆ. ತಿಳಿಸಿದ್ದಾರೆ.
ನ್ಯಾಯಾಧೀಶರು ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಮೊದಲ ಲೋಕ ಅದಾಲತ್ ಇದಾಗಿದ್ದು, ಕೇವಲ ಒಂದು ತಿಂಗಳು ಹತ್ತು ದಿನಗಳ ಅವಧಿಯಲ್ಲಿ ನ್ಯಾಯಾಧೀಶರ ಸಕಾರಾತ್ಮಕ ಶ್ರಮದಿಂದಾಗಿ ಈ ಯಶಸ್ಸು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಜಿಲ್ಲಾದ್ಯಂತ ನ್ಯಾಯಾಲಯಗಳಲ್ಲಿ ಒಟ್ಟು 44,105 ಬಾಕಿ ಪ್ರಕರಣಗಳಿವೆ. ಅವುಗಳಲ್ಲಿ ಲೋಕ ಅದಾಲತ್‌ಗೆ ಗುರುತಿಸಲಾದ 11,560 ಪ್ರಕರಣಗಳಲ್ಲಿ 5,792 ಇತ್ಯರ್ಥಗೊಂಡಿವೆ.
ಕೌಟುಂಬಿಕ ನ್ಯಾಯಾಲಯದಲ್ಲಿದ್ದ ಪ್ರಕರಣಗಳಲ್ಲಿ ದಾವಣಗೆರೆಯ 6 ಹಾಗೂ ಹೊನ್ನಾಳಿಯ 1 ಸೇರಿ ಒಟ್ಟು 7 ಜೋಡಿ ರಾಜಿ ಮಾಡಿಕೊಂಡು ಒಟ್ಟಿಗೆ ಬಾಳಲು ಒಪ್ಪಿದ್ದಾರೆ.
ಹಿರಿಯ ನಾಗರಿಕರಿಗೆ ಸಂಬಂಧಿಸಿದ 37 ಪ್ರಕರಣಗಳು ಯಶಸ್ವಿಯಾಗಿ ಇತ್ಯರ್ಥಗೊಂಡಿವೆ. ದೀರ್ಘ ಕಾಲದ ಪ್ರಕರಣಗಳಲ್ಲಿ 10 ವರ್ಷ ಹಳೆಯದಾದ 2 ಪ್ರಕರಣ, 7 ವರ್ಷ ಹಳೆಯದಾದ 1 ಪ್ರಕರಣ, 5 ವರ್ಷ ಹಳೆಯದಾದ 14 ಪ್ರಕರಣಗಳು ಇತ್ಯರ್ಥಗೊಂಡಿವೆ.
ನ್ಯಾಯಾಲಯದ ಮೆಟ್ಟಿಲೇರುವ ಮುನ್ನವೇ ಬಗೆಹರಿಸಬಹುದಾದ ಒಟ್ಟು 1,67,121 ವ್ಯಾಜ್ಯಪೂರ್ವ ಪ್ರಕರಣಗಳ ಪೈಕಿ 1,58,415 ಪ್ರಕರಣಗಳನ್ನು ಸಂಧಾನದ ಮೂಲಕ ಬಗೆಹರಿಸಲಾಗಿದೆ. ಇವುಗಳಲ್ಲಿ ಒಟ್ಟು 83.24 ಕೋಟಿ ರೂ. ಮೊತ್ತವನ್ನು ಪರಿಹಾರ ಮತ್ತು ರಾಜಿ/ಇತ್ಯರ್ಥದ ಮೂಲಕ ಪಾವತಿಸಲಾಗಿದೆ.
ಈ ಬಾರಿಯ ಲೋಕ ಅದಾಲತ್‌ನಲ್ಲಿ ಸಿವಿಲ್ ಪ್ರಕರಣಗಳು, ಕೌಟುಂಬಿಕ ಕಲಹಗಳು, ಬ್ಯಾಂಕ್ ವ್ಯವಹಾರಗಳು, ರಾಜಿ ಮಾಡಿಕೊಳ್ಳಬಹುದಾದ ಅಪರಾಧ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಪ್ರಕರಣಗಳು, ಜಾರಿ ಪ್ರಕರಣಗಳು ಹಾಗೂ ಭೂಸ್ವಾಧೀನ ಪ್ರಕರಣಗಳನ್ನು ಪರಿಗಣನೆಗೆ ತೆಗೆದುಕೊಂಡು ಇತ್ಯರ್ಥಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net