ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ವೇಲಾ ಡಿ.ಕೆ. ಮಾತನಾಡಿದರು. ಮಹಾವೀರ ಕರೆಣ್ಣವರ, ಪ್ರವೀಣ್ ಕುಮಾರ್, ಎಸ್.ಎನ್. ಹೆಗಡೆ, ಶಿವಪ್ಪ ಸಲಗರೆ, ಟಿ.ಆರ್. ಗುರು ಬಸವರಾಜ್ ಇದ್ದರು.
ದಾವಣಗೆರೆ :ಜಿಲ್ಲಾದ್ಯಂತ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವಿವಾಹ ವಿಚ್ಛೇದನ ಮತ್ತು ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದ್ದ 37 ಜೋಡಿಗಳು ಮತ್ತೆ ಒಂದಾದವು.
ಈ ಪೈಕಿ ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ 28 ಜೋಡಿ, ದಾವಣಗೆರೆಯ 4ನೇ ಅಪರ ಸಿವಿಲ್ ನ್ಯಾಯಾಲಯದಲ್ಲಿ 2, ಚನ್ನಗಿರಿ ತಾಲೂಕು ನ್ಯಾಯಾಲಯಗಳಲ್ಲಿ 5, ಹರಿಹರ ತಾಲೂಕು ನ್ಯಾಯಾಲಯಗಳಲ್ಲಿ 1, ಹೊನ್ನಾಳಿ ತಾಲೂಕು ನ್ಯಾಯಾಲಯಗಳಲ್ಲಿ 1 ಪ್ರಕರಣ ಸೇರಿವೆ.
ಅವರಲ್ಲಿ ಯುವ ಜೋಡಿಗಳು, ಹಿರಿಯರೂ ಇದ್ದರು. ಆಪ್ತ ಸಮಾಲೋಚನೆ ಮತ್ತು ಯಶಸ್ವಿ ಸಂಧಾನದ ಫಲವಾಗಿ ಈ ಜೋಡಿಗಳು ಹೊಸ ಜೀವನ ನಡೆಸಲು ಒಮ್ಮತಕ್ಕೆ ಬಂದರು.
ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯ ವೇಳೆ ಈ ಜೋಡಿಗಳು ಪರಸ್ಪರ ಹಾರ ಬದಲಾಯಿಸಿಕೊಂಡು, ಸಿಹಿ ತಿನ್ನಿಸಿ ಭವಿಷ್ಯದ ಜೀವನವನ್ನು ಒಂದಾಗಿ ಸಾಗಿಸುವ ಸಂಕಲ್ಪ ಮಾಡಿದವು.
ಈ ಸಂದರ್ಭದಲ್ಲಿ ಮಾತನಾಡಿದ ಈ ಜೋಡಿಗಳು, ತಾವು ಬೇರ್ಪಡಲು ಕಾರಣವಾದ ಅಂಶಗಳು, ಮತ್ತೆ ಒಂದಾಗಿದ್ದು ಹೇಗೆ ಎಂಬುದನ್ನು ಹೇಳಿಕೊಂಡರು. ಇನ್ನುಮುಂದೆ ಜತೆಯಾಗಿ, ಸಂತೋಷವಾಗಿರುತ್ತೇವೆ ಎಂದು ತಿಳಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ವೇಲಾ ಡಿ.ಕೆ. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡ ಪ್ರಕರಣಗಳ ಮಾಹಿತಿ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಕರೆಣ್ಣವರ, ಎರಡನೇ ಜಿಲ್ಲಾ ನ್ಯಾಯಾಧೀಶ ಪ್ರವೀಣ್ ಕುಮಾರ್, ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಎಸ್.ಎನ್. ಹೆಗಡೆ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಶಿವಪ್ಪ ಸಲಗರೆ, ವಕೀಲರ ಸಂಘದ ಅಧ್ಯಕ್ಷ ಟಿ.ಆರ್. ಗುರು ಬಸವರಾಜ್ ಇದ್ದರು.