ಮಾನವ ಹಕ್ಕು ಆಯೋಗದ ಮುಂದೆ 3413 ಪ್ರಕರಣ

ದಾವಣಗೆರೆಯ ಜಿ.ಪಂ. ಸಭಾಂಗಣದಲ್ಲಿ ಗುರುವಾರ, ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಂವಾದದಲ್ಲಿ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ. ಶಾಮ್ ಭಟ್, ಎಸ್.ಕೆ. ವಂಟಿಗೋಡಿ, ಜಿ.ಎಂ. ಗಂಗಾಧರ ಸ್ವಾಮಿ, ಗಿತ್ತೆ ಮಾಧವ ವಿಠ್ಠಲ ರಾವ್, ಉಮಾ ಪ್ರಶಾಂತ್, ಶಿವಕುಮಾರ ಶೀಲವಂತ ಇದ್ದರು.
ದಾವಣಗೆರೆಯ ಜಿ.ಪಂ. ಸಭಾಂಗಣದಲ್ಲಿ ಗುರುವಾರ, ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಂವಾದದಲ್ಲಿ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ. ಶಾಮ್ ಭಟ್, ಎಸ್.ಕೆ. ವಂಟಿಗೋಡಿ, ಜಿ.ಎಂ. ಗಂಗಾಧರ ಸ್ವಾಮಿ, ಗಿತ್ತೆ ಮಾಧವ ವಿಠ್ಠಲ ರಾವ್, ಉಮಾ ಪ್ರಶಾಂತ್, ಶಿವಕುಮಾರ ಶೀಲವಂತ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಶಾಮ್ ಭಟ್ ಹೇಳಿಕೆ
  • ವಿದ್ಯಾರ್ಥಿ ನಿಲಯಗಳಿಗೆ ಭೇಟಿ
  • ಜಿಲ್ಲಾಸ್ಪತ್ರೆಯ ಕಟ್ಟಡ ಶಿಥಿಲ
ದಾವಣಗೆರೆ : ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಮುಂದೆ 3413 ಪ್ರಕರಣಗಳು ಬಾಕಿ ಇವೆ ಎಂದು ಆಯೋಗದ ಹಂಗಾಮಿ ಅಧ್ಯಕ್ಷ ಟಿ. ಶಾಮ್ ಭಟ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾವು ಅಧಿಕಾರ ವಹಿಸಿಕೊಂಡಾಗ 5400 ಪ್ರಕರಣಗಳಿದ್ದವು. ಈಗ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಪ್ರತಿ ತಿಂಗಳೂ ದೂರುಗಳು ಸಲ್ಲಿಕೆಯಾಗುತ್ತವೆ. ಬಾಕಿ ಕೇಸ್‌ಗಳಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದವೇ ಹೆಚ್ಚು ಎಂದು ತಿಳಿಸಿದರು.
ಜಿಲ್ಲೆಯ ಕೆಲವು ವಿದ್ಯಾರ್ಥಿ ನಿಲಯಗಳಿಗೆ ತಾವು ಭೇಟಿ ನೀಡಿದ್ದು ಅಲ್ಲಿನ ವ್ಯವಸ್ಥೆಗಳು ಸಮರ್ಪಕವಾಗಿವೆ. ಕೆಲವು ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸ್ಥಳಾವಕಾಶ ಇಲ್ಲ. ಆದ್ದರಿಂದ ಹೊಸ ಕಟ್ಟಡಗಳನ್ನು ನಿರ್ಮಿಸಲು 22 ನಿವೇಶನಗಳು ಮಂಜೂರಾಗಿವೆ ಎಂದು ಮಾಹಿತಿ ನೀಡಿದರು.
ಚಿಗಟೇರಿ ಜಿಲ್ಲಾಸ್ಪತ್ರೆಯ ಕಟ್ಟಡ ಬಹಳ ಹಳೆಯದಾಗಿದ್ದು ಶಿಥಿಲವಾಗಿದೆ. ಹೊಸದಾಗಿ 400 ಹಾಸಿಗೆಗಳ ಕಟ್ಟಡ ನಿರ್ಮಾಣ ಆರಂಭವಾಗಿದೆ. ಆಸ್ಪತ್ರೆಯಲ್ಲಿ ಅರೆ ವೈದ್ಯಕೀಯ ಸಿಬ್ಬಂದಿಯ ಕೊರತೆಯಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳ ಜತೆ ಒಡಂಬಡಿಕೆ ಮಾಡಿಕೊಂಡು ಕೊರತೆಯನ್ನು ಸರಿದೂಗಿದುವಂತೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಇದ್ದರು.

ಹೆಸರು ದುರುಪಯೋಗ

ಆಯೋಗದ ಹೆಸರನ್ನೇ ಹೋಲುವ ಕೆಲವು ಸಂಘಟನೆಗಳನ್ನು ಮಾಡಿಕೊಂಡು ಅಧಿಕಾರಿಗಳಿಗೆ ಹೆದರಿಸುವುದು, ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುವ ಪ್ರವೃತ್ತಿ ಕಂಡುಬಂದಿದೆ ಎಂದು ಟಿ. ಶಾಮ್ ಭಟ್ ತಿಳಿಸಿದರು.
ಫಲಕಗಳಲ್ಲಿ, ಲೆಟರ್‌ಹೆಡ್‌ಗಳಲ್ಲಿ, ವಾಹನಗಳ ಮೇಲೆ ಆ ರೀತಿಯ ಹೆಸರುಗಳನ್ನು ಬರೆಸುವುದು ಗಮನಕ್ಕೆ ಬಂದರೆ ಆಯೋಗಕ್ಕೆ ತಿಳಿಸಬೇಕು ಎಂದು ಹೇಳಿದರು.
ಜಿಲ್ಲಾ ಕಾರಾಗೃಹ ನಿರ್ಮಾಣಕ್ಕೆ ಜಾಗ ಮಂಜೂರಾಗಿದೆ. ಮುಂಬರುವ ದಿನಗಳಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಾಜ್ಯದ ಉತ್ತಮ ನಿಲ್ದಾಣಗಳಲ್ಲಿ ಒಂದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
"

ಮಾನವ ಹಕ್ಕುಗಳ ಉಲ್ಲಂಘನೆಯಾದಾಗ ನೊಂದ ವ್ಯಕ್ತಿಗಳು ಅಥವಾ ಅವರ ಪರವಾಗಿ ಬೇರೆ ಯಾರಾದರೂ ದೂರು ದಾಖಲಿಸಬಹುದು. ಸ್ವಯಂ ಪ್ರೇರಿತ ದೂರು ದಾಖಲಿಸುವುದಕ್ಕೂ ಅವಕಾಶವಿದೆ. ಜಿಲ್ಲೆಯಲ್ಲಿ 6-7 ದೂರುಗಳು ಬಂದಿದ್ದು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net