ಮಾದಿಗ ಶಾಖಾ ಮಠಕ್ಕೆ ನೀಡಿ 25 ಎಕರೆ ಜಾಗ

ದಾವಣಗೆರೆಯಲ್ಲಿ ಜಿಲ್ಲಾ ಮಾದಿಗ ಮಹಾಸಭಾದ ಜಿಲ್ಲಾಧ್ಯಕ್ಷ ಬಿ.ಎಚ್.ವೀರಭದ್ರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರವಿನಾರಾಯಣ್, ಹೆಗ್ಗರೆ ರಂಗಪ್ಪ, ಎಸ್. ಮಲ್ಲಿಕಾರ್ಜುನ, ಎಲ್.ಎಂ. ಹನುಮಂತಪ್ಪ ಇತರರಿದ್ದರು.
ದಾವಣಗೆರೆಯಲ್ಲಿ ಜಿಲ್ಲಾ ಮಾದಿಗ ಮಹಾಸಭಾದ ಜಿಲ್ಲಾಧ್ಯಕ್ಷ ಬಿ.ಎಚ್.ವೀರಭದ್ರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರವಿನಾರಾಯಣ್, ಹೆಗ್ಗರೆ ರಂಗಪ್ಪ, ಎಸ್. ಮಲ್ಲಿಕಾರ್ಜುನ, ಎಲ್.ಎಂ. ಹನುಮಂತಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಿಪ್ಪೇಸ್ವಾಮಿ ಪಪೂ ಕಾಲೇಜಿಗೆ ಕೊಡಿ ಅನುದಾನ
  • ರಾಜ್ಯ ಸರ್ಕಾರ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟ
  • ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಎಚ್. ವೀರಭದ್ರಪ್ಪ ಎಚ್ಚರಿಕೆ
ದಾವಣಗೆರೆ: ಮಾದಿಗ ಸಮಾಜದ ಶಾಖಾ ಮಠ ಹಾಗೂ ಸಮುದಾಯ ಭವನ ನಿರ್ಮಾಣಕ್ಕಾಗಿ ಕೊಂಡಜ್ಜಿ ಸ್ಕೌಟ್ ಕ್ಯಾಂಪ್‌ನ 25 ಎಕರೆ ಜಾಗ ನೀಡಬೇಕೆಂದು ದಾವಣಗೆರೆ ಜಿಲ್ಲಾ ಮಾದಿಗ ಮಹಾಸಭಾದ ಜಿಲ್ಲಾಧ್ಯಕ್ಷ ಬಿ.ಎಚ್.ವೀರಭದ್ರಪ್ಪ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಎಲ್ಲಾ ಸಮಾಜದ ಕಲ್ಯಾಣಮಂಟಪಗಳಿಗೆ ಎಲ್ಲ ಸರ್ಕಾರಗಳು ಜಾಗ ನೀಡಿವೆ. ಆದರೆ ಮಾದಿಗ ಸಮಾಜವನ್ನು ಮಾತ್ರ ಕಡೆಗಣಿಸಿವೆ. ಕಾಂಗ್ರೆಸ್ ಸರ್ಕಾರ ಕೂಡ ಇದರಿಂದ ಹೊರತಾಗಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. 
ನಗರದಲ್ಲಿ ಇತರೆ ಸಮಾಜದ ಸಮುದಾಯಭವನಗಳಿಗೆ ಬಾಡಿಗೆ ನೀಡಲು ಸಾಧ್ಯವಾಗದು. ಹೀಗಾಗಿ ನಮ್ಮ ಸಮಾಜಕ್ಕೆ ಪ್ರತ್ಯೇಕ ಸಮುದಾಯ ಭವನ ಬೇಕಿದೆ. ಶಾಖಾಮಠ ಹಾಗೂ ಸಮುದಾಯ ಭವನಕ್ಕೆ ಸರ್ಕಾರ ಜಾಗ ನೀಡದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. 
ದಾವಣಗೆರೆಯ ಗಾಂಧಿನಗರದಲ್ಲಿ 40 ವರ್ಷ ಹಳೆಯದಾದ ಅಂಬೇಡ್ಕರ್ ಭವನವಿದೆ. ಇದನ್ನು ನೆಲಸಮಗೊಳಿಸಿ ಹೊಸ ಕಟ್ಟಡ ಕಟ್ಟಬೇಕಿದೆ. ನೇತಾಜಿ ವ್ಯಾಯಾಮ ಶಾಲೆಯನ್ನು ನವೀಕರಣಗೊಳಿಸಬೇಕಿದೆ. ಗಾಂಧಿನಗರದ ಉದ್ಯಾನದ ಅಭಿವೃದ್ಧಿಗೆ ನಗರಪಾಲಿಕೆ ಗಮನ ಹರಿಸಬೇಕಿದೆ.
ಮಹಾತ್ಮಗಾಂಧಿ ನಡೆದಾಡಿದ ಜಾಗ ಮಹಾತ್ಮ ಗಾಂಧಿ ಹಾಸ್ಟೆಲ್ ಬಳಿಯ ಡಾ. ತಿಪ್ಪೇಸ್ವಾಮಿ ಪಪೂ ಕಾಲೇಜಿಗೆ ಅನೇಕ ವರ್ಷದಿಂದ ವೇತನಾನುದಾನ ಬಿಡುಗಡೆಯಾಗಿಲ್ಲ. ಕೂಡಲೆ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಈ ವಿಚಾರ ಸಂಬಂಧ ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದನೆ ದೊರೆತಿಲ್ಲ. ಶೀಘ್ರವೇ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. 
ಸೋಮವಾರ ಕಾರ್ಯಾಗಾರ: ಮಾದಿಗ ಮಹಾಸಭಾದಿಂದ ಮೇ 25ರಂದು ಬೆಳಗ್ಗೆ 11 ಗಂಟೆಗೆ ನಗರದ ಶಿವಯೋಗಾಶ್ರಮದಲ್ಲಿ ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಮಾದಿಗ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಇದೇ ವೇಳೆ ಒಳಮೀಸಲು ಜಾರಿಗೊಳಿಸಿದ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸದಸ್ಯರಿಗೂ, ಶಾಸಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. 
ಕಾರ್ಯಕ್ರಮಕ್ಕೂ ಮುನ್ನ ಅಂದು ಮಾದಿಗ ಸಮಾಜದ 500 ವಿದ್ಯಾರ್ಥಿಗಳು ಅಂಬೇಡ್ಕರ್ ವೃತ್ತದಿಂದ ಶಿವಯೋಗಿ ಮಂದಿರದವರೆಗೆ ಮೆರವಣಿಗೆ ನಡೆಸುವರು ಎಂದು ಮಾಹಿತಿ ನೀಡಿದರು. 
ಸುದ್ದಿಗೋಷ್ಠಿಯಲ್ಲಿ ಮಹಾಸಭಾ ಜಿಲ್ಲಾ ಗೌರವಾಧ್ಯಕ್ಷ ರವಿನಾರಾಯಣ್, ಪ್ರಧಾನ ಕಾರ್ಯದರ್ಶಿ ಹೆಗ್ಗರೆ ರಂಗಪ್ಪ, ಖಜಾಂಚಿ ಎಸ್. ಮಲ್ಲಿಕಾರ್ಜುನ, ಎಲ್.ಎಂ. ಹನುಮಂತಪ್ಪ, ನಾಗರಾಜ್, ಹಲಗೆರಿ ಮಂಜಪ್ಪ, ಸಿ. ಬಸವರಾಜ್, ರಾಕೇಶ್, ಲಿಂಗರಾಜ್ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net