ದುರ್ಗಾಂಬಿಕಾ ಜಾತ್ರೆಯಲ್ಲಿ 216 ಟನ್ ಕಸ!

ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಬಳಿ ಮಹಾನಗರ ಪಾಲಿಕೆ ಸಿಬ್ಬಂದಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ದೃಶ್ಯ.
ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಬಳಿ ಮಹಾನಗರ ಪಾಲಿಕೆ ಸಿಬ್ಬಂದಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ದೃಶ್ಯ.
Published on

ಪ್ರಮುಖ ಮುಖ್ಯಾಂಶಗಳು

  • ಬೇವಿನಸೊಪ್ಪು, ಬಟ್ಟೆ ಇತ್ಯಾದಿ ತ್ಯಾಜ್ಯ
  • ಪಾಲಿಕೆ ಸಿಬ್ಬಂದಿಯಿಂದ ವಿಲೇವಾರಿ
ರಮೇಶ ಜಹಗೀರದಾರ್ ದಾವಣಗೆರೆ : ಲಕ್ಷಗಳ ಲೆಕ್ಕದಲ್ಲಿ ಭಕ್ತರು ಸೇರುವ ನಗರದೇವತೆ ದುರ್ಗಾಂಬಿಕಾ ದೇವಿ ಜಾತ್ರೆಯಲ್ಲಿ ಈ ಬಾರಿ ಬರೋಬ್ಬರಿ 216 ಟನ್ ಕಸ ಉತ್ಪಾದನೆಯಾಗಿದೆ. ಇಡೀ ನಗರದಲ್ಲಿ ಪ್ರತಿ ದಿನ ಉತ್ಪಾದನೆಯಾಗುವ ಕಸದ ಪ್ರಮಾಣಕ್ಕಿಂತ ಇದು ಹೆಚ್ಚುಕಮ್ಮಿ ಒಂದೂವರೆ ಪಟ್ಟು ಜಾಸ್ತಿ!.
ದೇವಿ ಜಾತ್ರೆ ಅಂಗವಾಗಿ ಫೆ. 24(ಮಂಗಳವಾರ) ಮತ್ತು 25(ಬುಧವಾರ)ರಂದು ದರ್ಶನ ಪಡೆಯಲು ಭಕ್ತ ಸಾಗರವೇ ಹರಿದು ಬಂದಿತು. ಅದರಲ್ಲೂ ಹರಕೆ ಹೊತ್ತು ಸೇವೆ ಸಲ್ಲಿಸಲು ಬಂದವರೇ ಹೆಚ್ಚು. ಬೇವಿನುಡುಗೆ ತೊಟ್ಟವರು, ಉರುಳುಸೇವೆ, ದೀಡ್ ನಮಸ್ಕಾರ ಹಾಕಿದವರ ಸಂಖ್ಯೆ ಜಾಸ್ತಿ ಇತ್ತು.
ದೇವಸ್ಥಾನದ ಮುಂಭಾಗ ಹಾಗೂ ಸುತ್ತಮುತ್ತ ಬೇವಿನಸೊಪ್ಪು ಹಾಗೂ ಬಟ್ಟೆಗಳು ಬಿದ್ದಿದ್ದವು. ಇವುಗಳ ಜತೆಗೆ ಬೇರೆ ಬೇರೆ ಕಡೆಗಳಲ್ಲಿ ಊಟದ ತಟ್ಟೆಗಳು, ಮೂಳೆಗಳು ಸೇರಿಕೊಂಡಿದ್ದವು.
ಮೊದಲ ಹಂತದಲ್ಲಿ ಆ ಕಸವನ್ನೆಲ್ಲ ಎತ್ತಿ ಬೂದಾಳು ರಸ್ತೆಯ ಇಂದಿರಾ ಕ್ಯಾಂಟೀನ್ ಬಳಿ ಸಂಗ್ರಹಿಸಲಾಯಿತು. ಎಲ್ಲವನ್ನೂ ಒಟ್ಟುಗೂಡಿಸಿ, ಶನಿವಾರದಿಂದ ಸೋಮವಾರದ ವರೆಗೆ ಆವರಗೊಳ್ಳ ಬಳಿಯ ತ್ಯಾಜ್ಯ ಸಂಗ್ರಹ ಘಟಕಕ್ಕೆ ಸ್ಥಳಾಂತರ ಮಾಡಲಾಯಿತು.
ನಗರದ ವಿವಿಧ ಬಡಾವಣೆಗಳಲ್ಲಿ ಪ್ರತಿ ದಿನ 170 ಟನ್ ಕಸ ಉತ್ಪತ್ತಿಯಾಗುತ್ತದೆ. ಜಾತ್ರೆಯ ದಿನಗಳಂದು ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ (216 ಟನ್) ತ್ಯಾಜ್ಯ ಸೃಷ್ಟಿಯಾಗಿತ್ತು. ಜಾತ್ರೆಗೆ ಬಂದಿದ್ದ ಭಕ್ತರ ಸಂಖ್ಯೆ ಹೆಚ್ಚಾಗಿತ್ತು ಎಂಬುದನ್ನು ಇದರ ಆಧಾರದ ಮೇಲೆ ಹೇಳಬಹುದು. ಇದನ್ನು ಮೊದಲೇ ನಿರೀಕ್ಷಿಸಿದ್ದ ಪಾಲಿಕೆ ಅಧಿಕಾರಿಗಳು ಅಗತ್ಯ ವ್ಯವಸ್ಥೆ ಮಾಡಿಕೊಂಡಿದ್ದರು.

ಸಿಬ್ಬಂದಿ, ವಾಹನ ಬಳಕೆ

ಜಾತ್ರೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ವಿಲೇವಾರಿ ಮಾಡುವುದಕ್ಕಾಗಿಯೆ ಮಹಾನಗರ ಪಾಲಿಕೆಯಿಂದ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. 120 ಸಿಬ್ಬಂದಿ 8 ಪಾಳೆಗಳಲ್ಲಿ ಕಾರ್ಯ ನಿರ್ವಹಿಸಿದರು. ಪಾಲಿಕೆಯ ಸಿಬ್ಬಂದಿಯ ಜತೆಗೆ ಹೆಚ್ಚುವರಿಯಾಗಿ 15 ಜನರನ್ನು ಈ ಕೆಲಸಕ್ಕೆ ನಿಯೋಜಿಸಲಾಗಿತ್ತು.
ಬೃಹತ್ ಪ್ರಮಾಣದಲ್ಲಿ ಉತ್ಪಾದನೆಯಾಗುವ ಕಸದ ವಿಲೇವಾರಿಗೆ 20 ಟ್ರಾೃಕ್ಟರ್, 2 ಟಿಪ್ಪರ್, 2 ಜೆಸಿಬಿ ಮತ್ತು 30-40 ಆಟೋ ಟಿಪ್ಪರ್‌ಗಳನ್ನು ಬಳಸಲಾಯಿತು. ಪ್ರತಿ ಪಾಳೆಗೆ 5 ಆಟೋ ಟಿಪ್ಪರ್‌ಗಳು ಕಾರ್ಯ ನಿರ್ವಹಿಸಿದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net