ಜಿಲ್ಲೆಯಲ್ಲಿ 21 ಬ್ಲಾೃಕ್ ಸ್ಪಾಟ್

ದಾವಣಗೆರೆಯಲ್ಲಿ ಸೋಮವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿ.ಎಂ. ಗಂಗಾಧರಸ್ವಾಮಿ, ಡಾ. ಎಚ್.ಟಿ. ಶೇಖರ್, ಸುನೀಲ್ ಇನ್ನಿತರ ಅಧಿಕಾರಿಗಳು ಇದ್ದರು.
ದಾವಣಗೆರೆಯಲ್ಲಿ ಸೋಮವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿ.ಎಂ. ಗಂಗಾಧರಸ್ವಾಮಿ, ಡಾ. ಎಚ್.ಟಿ. ಶೇಖರ್, ಸುನೀಲ್ ಇನ್ನಿತರ ಅಧಿಕಾರಿಗಳು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಪಘಾತಮುಕ್ತ ವಲಯಕ್ಕೆ ಕ್ರಮ
  • ರಸ್ತೆ ಸುರಕ್ಷತಾ ಸಮಿತಿ ಸಭೆ
ದಾವಣಗೆರೆ : ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಜತೆಗೆ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಒಟ್ಟು 21 ಅಪಾಯಕಾರಿ ಅಪಘಾತ ವಲಯಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಅಪಫಾತಮುಕ್ತ ಗೊಳಿಸಲು ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಒಂದು ಜೀವ ಉಳಿದರೂ ನಮಗೆ ಹೆಮ್ಮೆ. ಕಳೆದ ಮೂರು ವರ್ಷಗಳ ಅಪಘಾತದ ದತ್ತಾಂಶಗಳನ್ನು ಪರಿಶೀಲಿಸಿ ಎಲ್ಲ ಬ್ಲಾೃಕ್ ಸ್ಪಾಟ್‌ಗಳಲ್ಲಿ ಅಗತ್ಯ ಸುಧಾರಣೆ ತರಲು ವರದಿ ಸಿದ್ಧಪಡಿಸಲಾಗುವುದು. ಸುಪ್ರೀಂ ಕೋರ್ಟ್‌ನ ಆದೇಶದನ್ವಯ ನಗರದಲ್ಲಿ ಅತಿಕ್ರಮಣವಾಗಿರುವ ಫುಟ್‌ಪಾತ್‌ಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 2025ನೇ ಸಾಲಿಗೆ ಹೋಲಿಸಿದರೆ ಪ್ರಸ್ತುತ ವರ್ಷದಲ್ಲಿ ಮಾರಣಾಂತಿಕ ಅಪಘಾತಗಳ ಸಂಖ್ಯೆ ಇಳಿಮುಖವಾಗಿದೆ. ಕಳೆದ ವರ್ಷ 146 ಮಾರಣಾಂತಿಕ ಅಪಘಾತಗಳು ವರದಿಯಾಗಿದ್ದರೆ, ಈ ಬಾರಿ ಈ ಸಂಖ್ಯೆ 139ಕ್ಕೆ ಇಳಿದಿದ್ದು, ಒಟ್ಟು 7 ಅಪಘಾತಗಳು ಕಡಿಮೆಯಾಗಿವೆ. ಪೊಲೀಸ್ ಇಲಾಖೆಯ ನಿರಂತರ ಕಾರ್ಯಾಚರಣೆ, ಸ್ಥಳದಲ್ಲೇ ದಂಡ, ಹೆಲ್ಮೆಟ್ ಕಡ್ಡಾಯ ಜಾರಿ ಮತ್ತು ಅಪ್ರಾಪ್ತ ವಯಸ್ಕರ ಚಾಲನೆಗೆ ತಡೆ ಮಾಡಿರುವುದು ಇದಕ್ಕೆ ಪ್ರಮುಖ ಕಾರಣ ಎಂದರು.

ವಿಶೇಷ ಜಾಗೃತಿ, ತಪಾಸಣಾ ಅಭಿಯಾನ

ಇತ್ತೀಚೆಗೆ ಕಿರಿದಾದ ಸೇತುವೆಯೊಂದರ ಮೇಲೆ ನಡೆದ ಅಪಘಾತದಲ್ಲಿ ಟ್ರ್ಯಾಕ್ಟರ್‌ಗೆ ವಿಮೆ ಹಾಗೂ ಚಾಲಕನಿಗೆ ಪರವಾನಗಿ ಇಲ್ಲದಿರುವುದು ಕಂಡುಬಂದಿದೆ. ಟ್ರ್ಯಾಕ್ಟರ್‌ಗಳನ್ನು ಇತರ ಉದ್ದೇಶಗಳಿಗೆ ಬಳಸುವುದು, ಕರ್ಕಶ ಶಬ್ದ ಮಾಡುವುದು, ಪರವಾನಗಿ ಇಲ್ಲದೆ ಚಾಲನೆ ಮಾಡುವವರ ವಿರುದ್ಧ ಆರ್.ಟಿ.ಒ ಅಧಿಕಾರಿಗಳು ವಿಶೇಷ ಜಾಗೃತಿ ಮತ್ತು ತಪಾಸಣಾ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಡಿಸಿ ತಿಳಿಸಿದರು.
ಬಿತ್ತನೆ ಚಟುವಟಿಕೆಗಳು ಆರಂಭವಾಗುತ್ತಿರುವುದರಿಂದ ರಸ್ತೆಗಿಳಿಯುವ ಎಲ್ಲ ಟ್ರ್ಯಾಕ್ಟರ್ ಹಾಗೂ ಬಂಡಿಗಳ ಹಿಂಭಾಗದಲ್ಲಿ ಕಡ್ಡಾಯವಾಗಿ ರೇಡಿಯಂ ಸ್ಟಿಕ್ಕರ್ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸಾರ್ವಜನಿಕರು ಅಪಘಾತ ತಡೆಗೆ ರಸ್ತೆ ಉಬ್ಬುಗಳನ್ನು ನಿರ್ಮಿಸುವಂತೆ ಒತ್ತಾಯಿಸುತ್ತಿದ್ದರೂ, ಅವೈಜ್ಞಾನಿಕ ಹಂಪ್ಸ್‌ಗಳಿಂದಲೇ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಸುಪ್ರೀಂ ಕೋರ್ಟ್ ಆದೇಶದನ್ವಯ ಅವೈಜ್ಞಾನಿಕ ಉಬ್ಬುಗಳನ್ನು ತೆರವುಗೊಳಿಸಬೇಕಿದೆ. ಬದಲಿಗೆ ವೈಜ್ಞಾನಿಕವಾಗಿ ರಂಬ್ಲರ್ ಸ್ಟ್ರಿಪ್ಸ್ೃ ಅಳವಡಿಸಿ, ರಸ್ತೆಯ ಎರಡೂ ಬದಿಗಳಲ್ಲಿ ಕನಿಷ್ಠ 20ರಿಂದ 50 ಮೀಟರ್ ದೂರದಲ್ಲೇ ಎಚ್ಚರಿಕೆ ಫಲಕಗಳನ್ನು ಅಳವಡಿಸುವಂತೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗೆ ಸೂಚನೆ ನೀಡಿದರು.

8 ಸಿಗ್ನಲ್ ಅಳವಡಿಸಲು ಕ್ರಿಯಾಯೋಜನೆ

ಜಿಲ್ಲೆಯಲ್ಲಿ ಇನ್ನೂ 8 ಸಿಗ್ನಲ್ ಅಳವಡಿಸಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಒಂದು ಸಿಗ್ನಲ್ ನಿರ್ಮಿಸಲು 30 ಲಕ್ಷ ವೆಚ್ಚವಾಗುತ್ತದೆ. ಅನುದಾನದ ಲಭ್ಯತೆ ನೋಡಿಕೊಂಡು ಹಂತ ಹಂತವಾಗಿ ನಿರ್ಮಿಸಲಾಗುವುದು. ಅಪಘಾತಗಳು ಹೆಚ್ಚಿರುವ ಕಡೆ, ಚನ್ನಗಿರಿ ಮತ್ತು ಹರಿಹರಗಳಲ್ಲಿ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ಎಸ್ಪಿ ಡಾ. ಎಚ್.ಟಿ. ಶೇಖರ್ ತಿಳಿಸಿದರು.
ಈ ಯೋಜನೆಗೆ ಬ್ಯಾಂಕ್‌ಗಳು ಅಥವಾ ಇತರೆ ಖಾಸಗಿಯವರ ಸಹಭಾಗಿತ್ವ ಪಡೆಯಲಾಗುವುದು ಎಂದು ಹೇಳಿದರು.
ಹೆದ್ದಾರಿಯ ಹಲವು ಕಡೆಗಳಲ್ಲಿ ಮೀಡಿಯನ್ (ರಸ್ತೆ ವಿಭಜಕ) ಗ್ಯಾಪ್‌ಗಳಿರುವುದರಿಂದ ಚಾಲಕರು ಆಹಾರ ಮತ್ತಿತರ ಕಾರಣಗಳಿಗಾಗಿ ರಸ್ತೆ ದಾಟುವಾಗ ಭೀಕರ ಅಪಘಾತಗಳು ಸಂಭವಿಸುತ್ತಿವೆ.
ವಿಶೇಷವಾಗಿ ಬಾಡ ಕ್ರಾಸ್ ಬಳಿ ಕಳೆದ ನಾಲ್ಕು ತಿಂಗಳಲ್ಲಿ 2ರಿಂದ 3 ಸಾವುಗಳು ಸಂಭವಿಸಿವೆ. ವಾಹನ ಸವಾರರು ಮತ್ತು ಪಾದಚಾರಿಗಳು ನಿಯಮ ಬಾಹಿರವಾಗಿ ರಸ್ತೆ ದಾಟುವುದನ್ನು ತಡೆಯಲು ಮೀಡಿಯನ್‌ಗಳಿಗೆ ಕನಿಷ್ಠ 2ರಿಂದ 3 ಅಡಿ ಎತ್ತರದ ಕಬ್ಬಿಣದ ಮೆಶ್ ಅಳವಡಿಸುವಂತೆ ಎನ್‌ಎಚ್‌ಎಐ ಅಧಿಕಾರಿಗಳಿಗೆ ತಿಳಿಸಿದರು. ರಾತ್ರಿ ವೇಳೆ ಈ ಭಾಗದಲ್ಲಿ ಹೈವೇ ಪೆಟ್ರೋಲಿಂಗ್ ವಾಹನಗಳನ್ನು ನಿಯೋಜಿಸಲಾಗುವುದು ಎಂದು ಹೇಳಿದರು.
ಎನ್‌ಎಚ್‌ಎಐ ಅಧಿಕಾರಿ ಸುನೀಲ್ ಮಾತನಾಡಿ, ಬಾಡ ಕ್ರಾಸ್ ಬಳಿ ರಸ್ತೆ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಅಪಘಾತ ವಲಯಗಳ ಸುಧಾರಣೆಗಾಗಿ ಎನ್‌ಎಚ್‌ಎಐ ಕಡೆಯಿಂದ ತಲಾ 10 ಲಕ್ಷ ರೂ.ಗಳ ತಕ್ಷಣದ ನಿಧಿ ಲಭ್ಯವಿದ್ದು, ಅಗತ್ಯ ಬಿದ್ದರೆ ಪ್ರಾದೇಶಿಕ ಅಧಿಕಾರಿಗಳ ಅನುಮತಿಯೊಂದಿಗೆ 25 ಲಕ್ಷ ರೂ. ವರೆಗೆ ಅನುದಾನ ಬಳಸಿಕೊಳ್ಳಬಹುದು. ಎಸ್.ಎಸ್. ಆಸ್ಪತ್ರೆಯ ಬಳಿ ಅಂಡರ್‌ಪಾಸ್ ವಿಸ್ತೀರ್ಣವನ್ನು ಹೆಚ್ಚಿಸುವ ಬಗ್ಗೆ ಕ್ರಮ ವಹಿಸುವುದಾಗಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net