ದಾವಣಗೆರೆ :ಚಿತ್ರದುರ್ಗದಲ್ಲಿ ಶನಿವಾರ ನಡೆಯಲಿರುವ ಬಿಎಸ್‌ವೈ ಅಭಿಮಾನೋತ್ಸವ ಸಮಾರಂಭಕ್ಕೆ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ 20ರಿಂದ 25 ಸಾವಿರ ಅಭಿಮಾನಿಗಳು ತೆರಳಲಿದ್ದಾರೆ ಎಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶಕ್ಕೆ ತೆರಳಲು ನೂರಾರು ಬಸ್, ಕಾರು, ಟ್ರಾೃಕ್ಟರ್ ಇನ್ನಿತರ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಬಿ.ಎಸ್. ಯಡಿಯೂರಪ್ಪ ಅವರು 50 ವರ್ಷ ಕಾಲ ಪಕ್ಷ ಸಂಘಟನೆ ಮಾಡಿದ್ದಾರೆ. ಅನಂತ ಕುಮಾರ್ ಜತೆಗೂಡಿ ರಾಜ್ಯ ಸುತ್ತಿ ಪಕ್ಷವನ್ನು ಬೆಳೆಸಿದ್ದಾರೆ. ರೈತ ಬಜೆಟ್ ಮಂಡನೆ, ಸಾಲ ಮನ್ನಾ ಸೇರಿ 45 ಯೋಜನೆಗಳನ್ನು ಬಿಎಸ್‌ವೈ ಅಧಿಕಾರದಲ್ಲಿದ್ದಾಗ ನೀಡಿದ್ದಾರೆ. ಅವರ ಅಭಿಮಾನೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಬೇಕು ಎಂದು ಮನವಿ ಮಾಡಿದರು.
ಅಂದಿನ ಸಮಾರಂಭದಲ್ಲಿ ನಾಡಿನ ವಿವಿಧ ಭಾಗಗಳಿಂದ 9ರಿಂದ 10 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಅಂದು ಮಧ್ಯಾಹ್ನ 3 ಗಂಟೆಗೆ ಆಗಮಿಸಲಿದ್ದಾರೆ. ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದ್ದು ವಿವಿಧ ಮಠಾಧೀಶರು ಭಾಗವಹಿಸುವರು. ಎಲ್ಲರೂ ಸೇರಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮಾಜಿ ಶಾಸಕ ಎಚ್.ಪಿ. ರಾಜೇಶ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಅಣಬೇರು ಜೀವನಮೂರ್ತಿ, ದೇವರಮನಿ ಶಿವಕುಮಾರ್, ಶ್ರೀನಿವಾಸ ದಾಸಕರಿಯಪ್ಪ, ಎನ್.ಎ. ಮುರುಗೇಶ್, ರಾಜನಹಳ್ಳಿ ಶಿವಕುಮಾರ್, ಶಿವನಗೌಡ ಪಾಟೀಲ್, ವೀರೇಶ್ ಸುದ್ದಿಗೋಷ್ಠಿಯಲ್ಲಿದ್ದರು.
2028ರಲ್ಲಿ ಬಿಜೆಪಿ ಅಧಿಕಾರಕ್ಕೆ
ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆ ಆಗಿರಬಹುದು, ಆದರೆ ಮತ್ತೆ ಪುಟಿದೇಳುತ್ತೇವೆ. ಆ ಕ್ಷೇತ್ರದಲ್ಲಿ ಗೆಲ್ಲುತ್ತೇವೆ, 2028ರಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.
ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ 63,800ಕ್ಕೂ ಹೆಚ್ಚು ಮತ ಗಳಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಯ ಮತಗಳು ಕದಲಿಲ್ಲ, ಬರಬೇಕಾದ ಮತಗಳು ಬಂದಿವೆ. ಹಿನ್ನಡೆಗೆ ಹಲವು ಕಾರಣ ಇರಬಹುದು ಎಂದರು.
ಕಾಂಗ್ರೆಸ್ ಗೆಲ್ಲಲು ಹಣಬಲ ಕಾರಣ ಎಂದು ಮಾಧ್ಯಮಗಳಲ್ಲಿ ಚರ್ಚೆ ಆಗಿರುವುದು ನನ್ನ ಗಮನಕ್ಕೆ ಬಂದಿದೆ. ಏನೇ ಆದರೂ ಮತದಾರರ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ಚುನಾಯಿತರಾಗಿರುವ ಸಮರ್ಥ್ ಶಾಮನೂರು ಒಳ್ಳೆಯ ಕೆಲಸಗಳನ್ನು ಮಾಡಲಿ ಎಂದು ಸಲಹೆ ನೀಡಿದರು.
ಮತ ಎಣಿಕೆ ಕೇಂದ್ರದಲ್ಲಿ ಸ್ಟ್ರಾಂಗ್ ರೂಂನ ಬೀಗ ಕಳೆದಿರುವುದು ಬೇಜವಾಬ್ದಾರಿಯನ್ನು ತೋರಿಸುತ್ತದೆ. ಈ ರೀತಿಯ ಪ್ರಸಂಗವನ್ನು ಎಂದೂ ಕೇಳಿಲ್ಲ. ಈ ಲೋಪ ಎಸಗಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್‌ನಿಂದ ಅಭಿವೃದ್ಧಿಯಾಗಿಲ್ಲ. ಸ್ಮಾರ್ಟ್‌ಸಿಟಿ ಯೋಜನೆಯಿಂದ ದಾವಣಗೆರೆಯಲ್ಲಿ ಕೆಲಸಗಳಾಗಿವೆ. ದಾವಣಗೆರೆ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಿದ್ದು, ಮಹಾನಗರ ಪಾಲಿಕೆ ರಚನೆಯಾಗಿದ್ದು 200 ಕೋಟಿ ರೂ. ವಿಶೇಷ ಅನುದಾನ ನೀಡಿದ್ದು ಯಡಿಯೂರಪ್ಪ ಅವರ ಅಧಿಕಾರದ ಅವಧಿಯಲ್ಲಿ. 2028ರಲ್ಲಿ 150ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಮಹಾನಗರ ಪಾಲಿಕೆಯಲ್ಲೂ ಅಧಿಕಾರ ಹಿಡಿಯಲು ಸರ್ವ ಪ್ರಯತ್ನ ಮಾಡಲಾಗುವುದು ಎಂದರು.