ದಾವಣಗೆರೆಯಲ್ಲಿ ಶನಿವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಜಗದ್ಗುರು ಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಡಿ. ಸುಧಾಕರ್, ಹರ್ಷಿಣಿ ಸುಧಾಕರ್, ಎಚ್.ಎಸ್. ಶಿವಶಂಕರ್, ಪದ್ಮ ಪ್ರಕಾಶ್, ಸುನೀಲ್ ಕುಮಾರ್ ಡಿ, ಅಜಿತ್ ಕುಮಾರ್ ಬಿ.ಎಸ್, ಕೋಮಲ್ ಕುಂದನ್ ಇದ್ದರು.
ದಾವಣಗೆರೆ :ಜೈನ ಸಮಾಜದಿಂದ ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನ ಕಟ್ಟಡಕ್ಕೆ ಸರ್ಕಾರದಿಂದ ಇದೇ ಆರ್ಥಿಕ ವರ್ಷದಲ್ಲಿ 1 ಕೋಟಿ ರೂ. ಮಂಜೂರು ಮಾಡಿಸುವುದಾಗಿ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ಭರವಸೆ ನೀಡಿದರು.
ಸಕಲ ದಿಗಂಬರ ಜೈನ ಸಮಾಜ ಹಾಗೂ ಶ್ರೀ ಮಹಾವೀರ ಸಂಘದಿಂದ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಕುರಿತು ಮುಂದಿನ ತಿಂಗಳು ಆದೇಶ ಹೊರಡಿಸಲಾಗುವುದು. ಬರುವ ಆರ್ಥಿಕ ವರ್ಷದಲ್ಲಿ ಮತ್ತೊಂದು ಕೋಟಿ ರೂ. ಮಂಜೂರು ಮಾಡಿಸುವುದಾಗಿ ತಿಳಿಸಿದರು. ಅಗತ್ಯವೆನಿಸಿದರೆ ಶಾಸಕರ ಅನುದಾನದಿಂದ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಜೈನ ತತ್ವಗಳನ್ನು ಪಾಲಿಸಬೇಕು. ತೀರ್ಥಂಕರರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸದ್ಗತಿ ದೊರೆಯುತ್ತದೆ. ಮಹಾತ್ಮ ಗಾಂಧೀಜಿ ಅವರಿಗೆ ಜೈನ ಧರ್ಮದ ಸ್ವಾಮೀಜಿಗಳೇ ಗುರುಗಳಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಜೈನ ಸಮಾಜದ ಸ್ವಾಮೀಜಿಗಳೇ ಗುರುಗಳು ಎಂದು ಹೇಳಿದರು.
ನಾನು ಜೈನ ಸಮಾಜದಲ್ಲಿ ಜನಿಸಿದ್ದರಿಂದಲೇ 4 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ ಎಂದು ತಿಳಿಸಿದರು.
ಹರ್ಷಿಣಿ ಸುಧಾಕರ್ ಮಾತನಾಡಿ, ಜೈನ ಧರ್ಮದ ತತ್ವಗಳು ಪ್ರತಿಯೊಬ್ಬ ಜೀವಿಗೂ ಅನ್ವಯಿಸುತ್ತವೆ. ಈ ತತ್ವಗಳನ್ನು ಅರಿಯಬೇಕು. ಸ್ವಾಧ್ಯಾಯ ಮಾಡಬೇಕು ಎಂದು ಹೇಳಿದರು.
ಶ್ರೀ ಮಹಾವೀರ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಡಿ. ಪ್ರಾಸ್ತಾವಿಕ ಮಾತನಾಡಿ, ಜಿನ ಮಂದಿರಕ್ಕೆ 12 ವರ್ಷಗಳು ತುಂಬಿವೆ. ಇದೊಂದು ಐತಿಹಾಸಿಕ ಸಂದರ್ಭವಾಗಿದೆ. 2007 ರಲ್ಲಿ ಸಮಾಜಕ್ಕೆ ಸಿಎ ನಿವೇಶನ ಮಂಜೂರಾಗಿತ್ತು ಆ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಬೇಕೆಂಬ ಬಹು ದಿನಗಳ ಕನಸಿದೆ. ಅದಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಬೇಕು ಎಂದು ಸಚಿವ ಸುಧಾಕರ್‌ಗೆ ಮನವಿ ಮಾಡಿದರು.
ಅಖಿಲ ಕರ್ನಾಟಕ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪದ್ಮ ಪ್ರಕಾಶ್ ಮಾತನಾಡಿ, ಜೈನ ಸಮಾಜದಲ್ಲಿ ಪ್ರತಿಭಾವಂತ ಮಹಿಳೆಯರಿದ್ದಾರೆ. ಅವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹುಂಚ ಹೊಂಬುಜ ಜೈನ ಮಠದ ಜಗದ್ಗುರು ಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮತ್ತು ಶ್ರವಣಬೆಳಗೊಳದ ದಿಗಂಬರ ಜೈನ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜದ ಮುಖಂಡ ಅಜಿತ್ ಕುಮಾರ್ ಬಿ.ಎಸ್, ಕೋಮಲ್ ಕುಂದನ್ ಇದ್ದರು. ರೂಪಾ ಪೂರ್ಣಚಂದ್ರ ಸ್ವಾಗತಿಸಿದರು.