

ದಾವಣಗೆರೆ : ರಾಜ್ಯದಲ್ಲಿ ಪ್ರಧಾನಿ ಮೋದಿ ಅವರಿಗಿಂತ ಸಿಎಂ ಸಿದ್ದರಾಮಯ್ಯ ಹೆಚ್ಚು ಜನಪ್ರಿಯರಿದ್ದಾರೆ. ಬಿಜೆಪಿಯವರಿಗೆ ಇದನ್ನು ಸಹಿಸಲು ಆಗುತ್ತಿಲ್ಲ ಎಂದು ವಸತಿ ಸಚಿವ ಜಮೀರ್ ಅಹಮದ್ ಹೇಳಿದರು. ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾನುವಾರ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದೇವರಾಜ ಅರಸು ನಂತರ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ಜನ ಬೆಂಬಲವಿದೆ. ದಾವಣಗೆರೆಯಲ್ಲೇ ಜನ್ಮದಿನ ಆಚರಿಸಿಕೊಂಡು ಅದನ್ನು ಸಾಬೀತು ಮಾಡಿದ್ದಾರೆ. ಈ ಬಗ್ಗೆ ಬಿಜೆಪಿಯವರಿಗೆ ಹೊಟ್ಟೆ ಉರಿ ಎಂದರು. ಮುಡಾ ಹಗರಣ ಮುಚ್ಚಲು ಜಾತಿ ಗಣತಿ ಪ್ರಸ್ತಾಪ ಮಾಡಿಲ್ಲ, ಇದು ಒಂದು ವರ್ಷದ ಹಿಂದೆ ಎಐಸಿಸಿ ನಾಯಕ ರಾಹುಲ್ ಗಾಂಧಿ ತೆಗೆದುಕೊಂಡ ನಿರ್ಧಾರವಾಗಿದೆ ಎಂದು ಪ್ರತಿಕ್ರಿಯೆ ನೀಡಿದರು. ಮುಖ್ಯಮಂತ್ರಿ ಆಗಲು ಎಲ್ಲರಿಗೂ ಆಸೆ ಇರುತ್ತದೆ. ಆದರೆ ಈಗ ಸಿಎಂ ಕುರ್ಚಿ ಖಾಲಿ ಇಲ್ಲ. ಟಗರು ಕುರ್ಚಿ ಮೇಲೆ ಕೂತಿದೆ, ಅಲ್ಲಾಡಿಸಲು ಆಗುವುದಿಲ್ಲ. ಇಡಿ, ಐಟಿ ಸೇರಿ ಯಾರೇ ಬಂದರೂ ಸಿದ್ದರಾಮಯ್ಯ ಹೆದರುವುದಿಲ್ಲ ಎಂದು ತಿಳಿಸಿದರು.