

ದಾವಣಗೆರೆ : ಎರಡು ದಿನಗಳ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಬೆಣ್ಣೆನಗರಿ ದಾವಣಗೆರೆಯ ಎಂಬಿಎ ಕಾಲೇಜು ಮೈದಾನದಲ್ಲಿ ಭಾನುವಾರ ಸಂಭ್ರಮದ ಚಾಲನೆ ದೊರೆಯಿತು. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಿರುವ ಉತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗಾರಿ ಬಾರಿಸಿ, ಜಿಲ್ಲೆಯ ಪ್ರಮುಖ ಬೆಳೆಯಾದ ಅಡಕೆಯ ಹೊಂಬಾಳೆ ಬಿಡಿಸುವ ಮೂಲಕ ಉದ್ಘಾಟಿಸಿದರು. ಇದೇ ವೇಳೆ ಅವರು ‘ಯುವನಿಧಿ’ ಯೋಜನೆಯ ಪ್ರಸ್ತುತ ಸಾಲಿನ ಫಲಾನುಭವಿಗಳ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದರು. ರಾಜ್ಯದ 31 ಜಿಲ್ಲೆಗಳಿಂದ ಆಗಮಿಸಿರುವ 1200 ಸ್ಪರ್ಧಿಗಳು ಈ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಒಟ್ಟು 7 ವೇದಿಕೆಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಉತ್ಸವದಲ್ಲಿ ಯುವಜನರ ಕಲರವ ತುಂಬಿತ್ತು. ಅವರು ಹಾಡಿದರು, ಕುಣಿದರು, ಚಿತ್ರಕಲೆಯಲ್ಲಿ ಪ್ರತಿಭೆ ತೋರಿದರು. ಕಥೆ, ಕವನ ರಚನೆಯಲ್ಲಿ ತಮಗಿರುವ ಅಭಿರುಚಿಯನ್ನು ಹೊರ ಹಾಕಿದರು. ಉತ್ಸವದಲ್ಲಿ ಯುವಕ, ಯುವತಿಯರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿಳ್ಳೆ, ಕೇಕೆ, ಚಪ್ಪಾಳೆಯ ಸದ್ದು ಆವರಿಸಿತ್ತು. ಬೆಳಗ್ಗೆ ನಗರದ ಕರ್ನಲ್ ರವೀಂದ್ರನಾಥ ವೃತ್ತದಿಂದ ಎಂಬಿಎ ಕಾಲೇಜು ಮೈದಾನದ ವರೆಗೆ ಕಲಾ ತಂಡಗಳ ಮೆರವಣಿಗೆ ನಡೆಯಿತು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ... (ಬಾಕ್ಸ್) ಸಮಾಜಮುಖಿಯಾದರೆ ದೇಶದ ಆಸ್ತಿ ಯುವಜನರು ಸಮಾಜ ಮುಖಿಯಾಗಿ ಬೆಳೆದಾಗ ದೇಶದ ಆಸ್ತಿಯಾಗುತ್ತಾರೆ. ಇದಕ್ಕಾಗಿ ವೈಜ್ಞಾನಿಕ, ವೈಚಾರಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಎಂಬಿಎ ಕಾಲೇಜು ಮೈದಾನದಲ್ಲಿ ಯುವಜನೋತ್ಸವ ಉದ್ಘಾಟನೆ ನೆರವೇರಿಸಿ ಮಾತನಾಡಿ, ನಾವು ದೇಶಕ್ಕೆ ಹೊರೆಯಾಗದೇ, ಸಂಪತ್ತಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು. ದೇಶ ನಮಗೇನು ಕೊಟ್ಟಿತು ಎನ್ನುವುದಕ್ಕಿಂತ, ರಾಷ್ಟ್ರಕ್ಕೆ ನಾವೇನು ಕೊಟ್ಟಿದ್ದೇವೆ ಎನ್ನುವುದೇ ಮುಖ್ಯವಾಗಬೇಕು. ಅನೇಕ ದುಷ್ಟ ಶಕ್ತಿಗಳು ದೇಶದ ನೆಮ್ಮದಿ ಕೆಡಿಸಲು, ಪ್ರಗತಿ ಹಾಳು ಮಾಡಲು ಪ್ರಯತ್ನಿಸುತ್ತಿವೆ. ಕೆಲವರು ಧರ್ಮ, ಜಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂಥ ವಿಕೃತರಿಂದ ಯುವ ಜನರು ದೂರ ಉಳಿಯಬೇಕು. ಮನುಷ್ಯತ್ವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಸಂವಿಧಾನದ ಸಾರ ಪ್ರತಿಯೊಬ್ಬರಿಗೂ ಅರ್ಥವಾಗಬೇಕು. ಪ್ರತಿ ಪ್ರಜೆಗೂ ಅರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯ ದೊರೆಯಬೇಕು. ಎಲ್ಲರಿಗೂ ಅವರವರ ಧರ್ಮ, ನಂಬಿಕೆಯ ಆಚರಣೆಗೆ ಅವಕಾಶ ಇರಬೇಕು ಎನ್ನುವುದೇ ಸಂವಿಧಾನದ ತಿರುಳು. ಸಂವಿಧಾನ ಇದ್ದುದರಿಂದಲೇ ನಾನು ಮುಖ್ಯಮಂತ್ರಿ ಆಗಲು ಸಾಧ್ಯವಾಯಿತು. ಸಂವಿಧಾನವನ್ನು ಕಾಪಾಡುವುದು ನಮ್ಮ ಜವಾಬ್ದಾರಿ ಎಂದರು. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಶಾಸಕರಾದ ಡಿ.ಜಿ. ಶಾಂತನಗೌಡ, ಬಿ.ಪಿ. ಹರೀಶ್, ಬಸವರಾಜು ಶಿವಗಂಗಾ, ಕೆ.ಎಸ್. ಬಸವಂತಪ್ಪ, ಬಿ. ದೇವೇಂದ್ರಪ್ಪ, ಎಂಎಲ್ಸಿ ಅಬ್ದುಲ್ ಜಬ್ಬಾರ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಸಗೋಡು ಜಯಸಿಂಹ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿ ಡಿ. ರಣದೀಪ್, ಆಯುಕ್ತ ಆರ್. ಚೇತನ್, ಡಿಸಿ ಜಿ.ಎಂ. ಗಂಗಾಧರ ಸ್ವಾಮಿ ಇದ್ದರು. ... (ಬಾಕ್ಸ್) ಯುವನಿಧಿಗೆ 213 ಕೋಟಿ ರೂ. ಬಳಕೆ ರಾಜ್ಯದಲ್ಲಿ 1.62 ಲಕ್ಷ ಯುವಜನರಿಗೆ ‘ಯುವನಿಧಿ’ ಯೋಜನೆಯಡಿ ನವೆಂಬರ್ ಅಂತ್ಯದ ವರೆಗೆ 216 ಕೋಟಿ ರೂ. ನೀಡಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು. ದಾವಣಗೆರೆ ಜಿಲ್ಲೆಯಲ್ಲಿ 5802 ನಿರುದ್ಯೋಗಿಗಳಿಗೆ 8.50 ಕೋಟಿ ರೂ. ನೆರವು ದೊರೆತಿದೆ. ಅವರಿಗೆ ಕೌಶಲ ತರಬೇತಿಯನ್ನೂ ನೀಡಲಾಗುತ್ತಿದೆ. ಸರ್ಕಾರ ಯುವಜನರ ಪರವಾಗಿ ಗಟ್ಟಿಯಾಗಿ ನಿಲ್ಲುವ ಸಂಕಲ್ಪ ಮಾಡಿದೆ ಎಂದು ತಿಳಿಸಿದರು.