

ರಮೇಶ ಜಹಗೀರದಾರ್ ದಾವಣಗೆರೆ : ಬೆಣ್ಣೆನಗರಿ ದಾವಣಗೆರೆಯಲ್ಲಿ ರಾಜ್ಯಮಟ್ಟದ ಯುವಜನೋತ್ಸವ ಭಾನುವಾರ ಮತ್ತು ಸೋಮವಾರ ನಡೆಯಲಿದ್ದು ಅಂತಿಮ ಹಂತದ ಸಿದ್ಧತೆಗಳಾಗಿವೆ. ಈ ಹಬ್ಬದಲ್ಲಿ ಎಲ್ಲ ಜಿಲ್ಲೆಗಳಿಂದ 1200 ಸ್ಪರ್ಧಿಗಳು ಭಾಗವಹಿಸುತ್ತಿದ್ದು ಕಲೆ ಮತ್ತು ಸಂಸ್ಕೃತಿಯ ರಸದೌತಣ ನೀಡಲಿದ್ದಾರೆ. ಹನ್ನೆರಡು ವರ್ಷಗಳ ನಂತರ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಉತ್ಸವವನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತ ಟೊಂಕ ಕಟ್ಟಿ ನಿಂತಿದೆ. ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಯುವಜನೋತ್ಸವದ ಫ್ಲೆಕ್ಸ್, ರಾಜಕೀಯ ನಾಯಕರ ಕಟೌಟ್‌ಗಳು ರಾರಾಜಿಸುತ್ತಿವೆ. ಯುವಜನೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿನ ಎಂ.ಬಿ.ಎ ಕಾಲೇಜು ಮೈದಾನದಲ್ಲಿ ಭಾನುವಾರ ಬೆಳಗ್ಗೆ 10.30ಕ್ಕೆ ನಗಾರಿ ಬಾರಿಸಿ, ಜಿಲ್ಲೆಯ ಪ್ರಮುಖ ಬೆಳೆಯಾದ ಅಡಕೆಯ ಹೊಂಬಾಳೆ ಬಿಡಿಸುವ ಮೂಲಕ ಉದ್ಘಾಟಿಸಲಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಯುವನಿಧಿ’ಯ ಪ್ರಸ್ತುತ ಸಾಲಿನ ಫಲಾನುಭವಿಗಳ ನೋಂದಣಿ ಪ್ರಕ್ರಿಯೆಗೆ ಸಿಎಂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಡಾ. ಶಾಮನೂರು ಶಿವಶಂಕರಪ್ಪ ಸೇರಿದಂತೆ ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ. ಇದಕ್ಕೂ ಮೊದಲು ರಾಜ್ಯ ಹಾಗೂ ಹೊರ ರಾಜ್ಯದ ಕಲಾ ತಂಡಗಳ ಮೆರವಣಿಗೆ ನಡೆಯಲಿದೆ. ಸ್ಪರ್ಧಿಗಳ ಜತೆಗೆ 30 ಮಂದಿ ತೀರ್ಪುಗಾರರು, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಶನಿವಾರ ರಾತ್ರಿಯ ವೇಳೆಗೆ ವಿವಿಧ ಜಿಲ್ಲೆಗಳಿಂದ 700ಕ್ಕೂ ಹೆಚ್ಚು ಸ್ಪರ್ಧಿಗಳು ನಗರಕ್ಕೆ ಆಗಮಿಸಿದ್ದರು. ಮುಖ್ಯ ವೇದಿಕೆಯ ಸ್ಥಳದಲ್ಲಿ ಜರ್ಮನ್ ಮಾದರಿಯ ಟೆಂಟ್ ನಿರ್ಮಿಸಲಾಗಿದ್ದು 5 ಸಾವಿರ ಆಸನಗಳಿಗೆ ವ್ಯವಸ್ಥೆ ಮಾಡಲಾಗಿದೆ. ಸ್ಪರ್ಧಿಗಳಿಗೆ ಸಮಾಜ ಕಲ್ಯಾಣ, ಅಲ್ಪಸಂಖ್ಯಾತ ಹಾಗೂ ಬಿಸಿಎಂ ಹಾಸ್ಟೆಲ್‌ಗಳಲ್ಲಿ ವಾಸ್ತವ್ಯ, 10 ಸಾವಿರ ಜನರಿಗೆ ಬಗೆ ಬಗೆಯ ಖಾದ್ಯಗಳ ವ್ಯವಸ್ಥೆ (ಸಸ್ಯಾಹಾರ ಮತ್ತು ಮಾಂಸಾಹಾರ) ಮಾಡಲಾಗಿದೆ. ... * 150 ಅಡಿ ಅಗಲ, 350 ಅಡಿ ಉದ್ದದ ಜರ್ಮನ್ ಟೆಂಟ್ * ಮುಖ್ಯ ವೇದಿಕೆ 80 ಅಡಿ ಅಗಲ, 60 ಅಡಿ ಉದ್ದ * ‘ಡಿ’ ಜೋನ್‌ನಲ್ಲಿ ಸಿರಿಧಾನ್ಯಗಳ ಚಿತ್ತಾರ * ಸ್ಪರ್ಧೆಗಳಲ್ಲಿ ಜಾನಪದ ಗೀತೆ, ಜಾನಪದ ನೃತ್ಯ, ಡಿಕ್ಲೆಮೇಶನ್ (ವಾಕ್ಚಾತುರ್ಯ), ಕಥೆ ರಚನೆ, ಕಾವ್ಯ ರಚನೆ, ಚಿತ್ರಕಲೆ, ವಿಜ್ಞಾನ ಪ್ರದರ್ಶನ * ಮಣಿಕಾಂತ ಕದ್ರಿ ಅವರ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ * ಪಂಜಾಬಿನ ಬಾಂಗ್ಡಾ, ಒಡಿಶಾದ ಸಂಭಲ್ಪುರಿ, ಮಹಾರಾಷ್ಟ್ರದ ಲಾವಣಿ, ಕೇರಳದ ಕಥಕ್ಕಳಿ ಹಾಗೂ ಥಯ್ಯಂ, ಮಧ್ಯ ಪ್ರದೇಶದ ಬರೇಡಿ ನೃತ್ಯ * ಯುವ ಗೀತೆ, ಜಿಲ್ಲೆಯ ವಿಶೇಷತೆ ಬಿಂಬಿಸುವ ಲೋಗೋ * ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ 40 ಸಾಧಕರಿಗೆ ಗೌರವ