ಬೆಣ್ಣೆನಗರಿಯಲ್ಲಿ ರಾಜ್ಯ ಯುವಜನೋತ್ಸವ

dvg-yuvajanotsava.jpg
Published on

ರಮೇಶ ಜಹಗೀರದಾರ್ ದಾವಣಗೆರೆ :  ರಾಜ್ಯಮಟ್ಟದ ಯುವಜನೋತ್ಸವ ಜ. 5 ಮತ್ತು 6 ರಂದು ನಗರದಲ್ಲಿ ನಡೆಯಲಿದ್ದು, ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಈ ವಿಶಿಷ್ಟ ಉತ್ಸವಕ್ಕೆ ಬೆಣ್ಣೆನಗರಿ ದಾವಣಗೆರೆ ಸಜ್ಜಾಗಿದೆ.  ಹೊಸ ವರ್ಷದ ಆರಂಭದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಎಲ್ಲ ಜಿಲ್ಲೆಗಳಿಂದ 1200 ಸ್ಪರ್ಧಿಗಳು ಭಾಗವಹಿಸಲಿದ್ದು ಎರಡು ದಿನಗಳ ಕಾಲ ಕಲೆಯ ರಸದೌತಣ ಉಣಬಡಿಸಲಿದ್ದಾರೆ.  ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಿರುವ ಯುವಜನೋತ್ಸವಕ್ಕೆ ಇಲ್ಲಿನ ಎಂ.ಬಿ.ಎ ಕಾಲೇಜು ಮೈದಾನದಲ್ಲಿ ಸಿದ್ಧತೆಗಳಾಗಿವೆ. ಮುಖ್ಯ ವೇದಿಕೆಯ ಸ್ಥಳದಲ್ಲಿ ಜರ್ಮನ್ ಮಾದರಿಯ ಟೆಂಟ್ ನಿರ್ಮಿಸಲಾಗಿದ್ದು 5 ಸಾವಿರ ಆಸನಗಳಿಗೆ ವ್ಯವಸ್ಥೆ ಮಾಡಲಾಗಿದೆ.  ಸ್ಪರ್ಧಿಗಳ ಜತೆಗೆ 30 ಮಂದಿ ತೀರ್ಪುಗಾರರು, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ 40 ಜನ ಸಾಧಕರನ್ನು ಉತ್ಸವದಲ್ಲಿ ಗೌರವಿಸಲಾಗುವುದು.  ಸ್ಪರ್ಧಿಗಳಿಗೆ ಸಮಾಜ ಕಲ್ಯಾಣ, ಅಲ್ಪಸಂಖ್ಯಾತ ಹಾಗೂ ಬಿಸಿಎಂ ಹಾಸ್ಟೆಲ್‌ಗಳಲ್ಲಿ ವಾಸ್ತವ್ಯ, 10 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬ ಸ್ಪರ್ಧಿಗೂ ಟಿ-ಶರ್ಟ್, ಕ್ಯಾಪ್, ಬ್ಯಾಗ್, ಮೆಟಲ್ ಬ್ಯಾಡ್ಜ್ ಜತೆಗೆ ಅಗತ್ಯ ವಸ್ತುಗಳ ಕಿಟ್ ಒದಗಿಸಲು ಆಯೋಜಕರು ಚಿಂತನೆ ನಡೆಸಿದ್ದಾರೆ. ಅಲ್ಲದೇ ತರಕಾರಿ ಬೀಜಗಳ ಕಿಟ್ ಕೂಡಾ ಕೈಸೇರಲಿದೆ.  ಜಿಲ್ಲೆಯಲ್ಲಿ ರಾಜ್ಯಮಟ್ಟದ ಯುವಜನೋತ್ಸವ ನಡೆಯುತ್ತಿರುವುದು ಇದು 4ನೇ ಬಾರಿ. 1999 ರಲ್ಲಿ ದಾವಣಗೆರೆಯಲ್ಲಿ, 2007 ರಲ್ಲಿ ಆನಗೋಡಿನಲ್ಲಿ, 2012 ರಲ್ಲಿ ಉಚ್ಚಂಗಿ ದುರ್ಗದಲ್ಲಿ ಆಯೋಜಿಸಲಾಗಿತ್ತು.  ...    (ಬಾಕ್ಸ್)  ‘ಯುವನಿಧಿ’ ನೋಂದಣಿಗೆ ಚಾಲನೆ  ಯುವಜನೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಬೆಳಗ್ಗೆ 10.30 ಕ್ಕೆ ನಗಾರಿ ಬಾರಿಸಿ, ಜಿಲ್ಲೆಯ ಪ್ರಮುಖ ಬೆಳೆಯಾದ ಅಡಕೆಯ ಹೊಂಬಾಳೆ ಬಿಡಿಸುವ ಮೂಲಕ ಉದ್ಘಾಟಿಸಲಿದ್ದಾರೆ.  ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಯುವನಿಧಿ’ಯ ಪ್ರಸ್ತುತ ಸಾಲಿನ ಫಲಾನುಭವಿಗಳ ನೋಂದಣಿ ಪ್ರಕ್ರಿಯೆಗೆ ಸಿಎಂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಿದ್ದಾರೆ.  ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಸಂವಿಧಾನದ ಪೀಠಿಕೆಯನ್ನು ಬೋಧನೆ ಮಾಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಡಾ. ಶಾಮನೂರು ಶಿವಶಂಕರಪ್ಪ ಸೇರಿದಂತೆ ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ.  ಇದಕ್ಕೂ ಮೊದಲು ರಾಜ್ಯ ಹಾಗೂ ಹೊರ ರಾಜ್ಯದ ಕಲಾ ತಂಡಗಳ ಮೆರವಣಿಗೆ ನಡೆಯಲಿದೆ.  ...    * ಸ್ಪರ್ಧೆಗಳಲ್ಲಿ ಜಾನಪದ ಗೀತೆ, ಜಾನಪದ ನೃತ್ಯ, ಡಿಕ್ಲೆಮೇಶನ್ (ವಾಕ್ಚಾತುರ್ಯ), ಕಥೆ ರಚನೆ, ಕಾವ್ಯ ರಚನೆ, ಚಿತ್ರಕಲೆ, ವಿಜ್ಞಾನ ಪ್ರದರ್ಶನ  * ಮಣಿಕಾಂತ ಕದ್ರಿ ಅವರ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ  * ಪಂಜಾಬಿನ ಬಾಂಗ್ಡಾ, ಒಡಿಶಾದ ಸಂಭಲ್ಪುರಿ, ಮಹಾರಾಷ್ಟ್ರದ ಲಾವಣಿ, ಕೇರಳದ ಕಥಕ್ಕಳಿ ಹಾಗೂ ಥಯ್ಯಂ, ಮಧ್ಯ ಪ್ರದೇಶದ ಬರೇಡಿ ನೃತ್ಯ  * ಯುವ ಗೀತೆ, ಜಿಲ್ಲೆಯ ವಿಶೇಷತೆ ಬಿಂಬಿಸುವ ಲೋಗೋ  * 150 ಅಡಿ ಅಗಲ, 350 ಅಡಿ ಉದ್ದದ ಜರ್ಮನ್ ಟೆಂಟ್  * ಮುಖ್ಯ ವೇದಿಕೆ 80 ಅಡಿ ಅಗಲ, 60 ಅಡಿ ಉದ್ದ  * ‘ಡಿ’ ಜೋನ್‌ನಲ್ಲಿ ಸಿರಿಧಾನ್ಯಗಳ ಚಿತ್ತಾರ  * ಆರೋಗ್ಯ ಶಿಬಿರ ಆಯೋಜನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net