

ದಾವಣಗೆರೆ : ಯುವಜನೋತ್ಸವಗಳು ನಗರ ಪ್ರದೇಶಕ್ಕೆ ಸೀಮಿತವಾಗದೇ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಆಯೋಜಿಸಬೇಕು. ಇದರಿಂದ ಹಳ್ಳಿಯ ಪ್ರತಿಭೆಗಳು ಬೆಳಕಿಗೆ ಬರುತ್ತವೆ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಲಹೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೇರಾ ಯುವ ಭಾರತ್, ರಾಷ್ಟ್ರೀಯ ಸೇವಾ ಯೋಜನೆ, ಜಿಲ್ಲಾ ವಿಜ್ಞಾನಾಸಕ್ತರ ಬಳಗದ ಆಶ್ರಯದಲ್ಲಿ ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಯುವಜನೋತ್ಸವ ಆಯೋಜಿಸುವುದರಿಂದ ಕೋಲಾಟ, ಬಯಲಾಟ, ಸಣ್ಣಾಟ, ದೊಡ್ಡಾಟ, ಸಾಹಿತ್ಯ, ಸಂಗೀತ, ನಾಟಕ, ನೃತ್ಯ, ಶಿಲ್ಪಕಲೆ, ಜಾನಪದ ಕಲೆಗಳು ಅನಾವರಣಗೊಳ್ಳುತ್ತವೆ ಎಂದು ಅಭಿಪ್ರಾಯಪಟ್ಟರು. ಯುವಜನೋತ್ಸವ ಆಚರಿಸಲು ಸರ್ಕಾರ ಲಕ್ಷಾಂತರ ರೂ.ಗಳನ್ನು ನೀಡುತ್ತದೆ. ಆದರೆ ಈ ಹಿಂದೆ ನಡೆದ ಕೆಲವು ಯುವಜನೋತ್ಸವಗಳು ಯುವಜನತೆ ಒಳಗೊಳ್ಳುವ ಕಾರ್ಯಕ್ರಮವಾಗದೇ ಸರ್ಕಾರದ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದವು. ಆ ರೀತಿ ಆಗಬಾರದು ಎಂದರು. ಸರ್ಕಾರ ಯಾವ ಉದ್ದೇಶಕ್ಕೆ ಹಣ ನೀಡುತ್ತದೆಯೋ ಅದು ಸಾರ್ಥಕವಾಗಬೇಕು. ಯುವಜನೋತ್ಸವ ಯುವಜನತೆಯನ್ನು ಬಡಿದೆಬ್ಬಿಸಬೇಕೇ ಹೊರತು, ಕಾಟಾಚಾರದ ಕಾರ್ಯಕ್ರಮವಾಗಿ ಸರ್ಕಾರದ ಹಣ ಪೋಲಾಗಬಾರದು ಎಂದು ತಿಳಿಸಿದರು. ಯುವಜನರು ಮನಸ್ಸು ಮಾಡಿದರೆ, ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಏನನ್ನು ಬೇಕಾದರೂ ಸಾಧಿಸಬಹುದು. ಆದರೆ ಪ್ರಸ್ತುತ ಮೊಬೈಲ್ ಗೀಳಿಗೆ ದಾಸರಾಗಿದ್ದಾರೆ. ಜಾನಪದ ಕಲೆಗಳು ಕಮರಿ ಹೋಗುತ್ತಿವೆ. ಮಕ್ಕಳು ಮತ್ತು ಯುವಜನತೆ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ. ಕುಂಬಾರ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಮಾಗಾನಹಳ್ಳಿ ಮಂಜುನಾಥ್ ಇದ್ದರು. ...