

ದಾವಣಗೆರೆ : ಅಡುಗೆ ಮನೆಯಲ್ಲಿ ಆರೋಗ್ಯ ಕಳೆದುಕೊಂಡು ಆಸ್ಪತ್ರೆಯಲ್ಲಿ ಹುಡುಕುವಂಥ ಜೀವನ ಶೈಲಿಯನ್ನು ಬೆಳೆಸಿಕೊಂಡಿದ್ದೇವೆ ಎಂದು ಶ್ರೀ ಪರಮಹಂಸ ಅಥರ್ವ ಆಯುರ್ಧಾಮದ ಸಂಸ್ಥಾಪಕ ಡಾ. ಮಲ್ಲಿಕಾರ್ಜುನ ಡಂಬಳ ಕಳವಳ ವ್ಯಕ್ತಪಡಿಸಿದರು. ರಾಷ್ಟ್ರೋತ್ಥಾನ ವಿದ್ಯಾಲಯ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಮತ್ತು ರಾಷ್ಟ್ರೋತ್ಥಾನ ಸಂಯುಕ್ತ ಪದವಿಪೂರ್ವ ಕಾಲೇಜು ಹಾಗೂ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ನಗರದ ನಿಟ್ಟುವಳ್ಳಿಯ ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಆಸ್ಪತ್ರೆಯಲ್ಲಿ ಔಷಧಗಳು ಸಿಗುತ್ತವೆಯೇ ಹೊರತು ಆರೋಗ್ಯವಲ್ಲ. ಬದುಕನ್ನು ಅನುಭವಿಸಲು ಉತ್ತಮ ಸ್ವಾಸ್ಥೃ ಇರಬೇಕು. ನಾವು ಸೇವಿಸುವ ಆಹಾರ ಮತ್ತು ರೂಢಿಸಿಕೊಂಡಿರುವ ಜೀವನ ಶೈಲಿಯು ಅದನ್ನು ನಿರ್ಧರಿಸುತ್ತವೆ. ಎರಡೂ ಸಂಗತಿಗಳನ್ನು ಹೇಗೆ ಪಾಲಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ ಎಂದರು. ಆರೋಗ್ಯವು ಸಹಜವಾಗಿರಬೇಕು, ಅದು ಎಲ್ಲಿಂದಲೋ ತಂದುಕೊಳ್ಳುವಂಥದಲ್ಲ. ಆಸ್ಪತ್ರೆಯಲ್ಲಂತೂ ಸಿಗುವುದಿಲ್ಲ. ಈ ಗುಟ್ಟನ್ನು ಅರಿತು ನಮ್ಮ ಜೀವನ ಶೈಲಿ ಆಹಾರದ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಯೋಗವೆಂದರೆ ಕೇವಲ ಆಸನಗಳನ್ನು ಮಾಡುವುದಲ್ಲ, ಅದರ ವ್ಯಾಪ್ತಿ ವಿಶಾಲವಾಗಿದೆ. ಆದರೆ ಇತ್ತೀಚೆಗೆ ಯೋಗ ದಿನಾಚರಣೆಯು ‘ಯೋಗಾಸನ ದಿನಾಚರಣೆ’ಯಾಗಿ ಬಿಟ್ಟಿದೆ. ಯೋಗದಲ್ಲಿ 8 ಭಾಗಗಳಿವೆ. ಯಮ ನಿಯಮವೂ ಅಷ್ಟೇ ಮುಖ್ಯ. ನಮಗೆ ತೊಂದರೆಯಾಗದಂತೆ, ಜಗತ್ತಿಗೆ ಹಿತವಾಗುವಂತೆ ಬದುಕಬೇಕು ಎಂದು ಹೇಳಿದರು. ಮಗು ತಾಯಿಯ ಗರ್ಭದಲ್ಲಿ ಇರುವಾಗಲೇ ಶಿಕ್ಷಣ ಆರಂಭಿಸಬೇಕು ಎಂದ ಅವರು, ಬೇಗ ಮಲಗಿ ಬೇಗ ಏಳುವ ಪರಿಪಾಠ ಬೆಳೆಸಿಕೊಳ್ಳಬೇಕು. ಬೆಳಗ್ಗೆ ಏಳಲು ಅಲಾರ್ಮ್ ಇಟ್ಟುಕೊಳ್ಳಬಾರದು, ರಾತ್ರಿ ಬೇಗ ಮಲಗುವುದಕ್ಕೆ ಅದನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು. ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ. ನವೀನ್ ಮಾತನಾಡಿ, ನಮ್ಮ ಹಿರಿಯರ ಆದರ್ಶಗಳನ್ನು ನಾವೂ ಅನುಸರಿಸಬೇಕು. ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ, ಓದುಗರಿಗೆ ಸುದ್ದಿಗಳನ್ನು ನೀಡುವ ಜತೆಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ ಎಂದು ತಿಳಿಸಿದರು. ವಿದ್ಯಾರ್ಥಿ ಎಚ್.ವಿ. ಚೇತನ್ ವಿಶ್ವ ಸಂಗೀತ ದಿನದ ಕುರಿತು ಮಾತನಾಡಿ, ಸಂಗೀತವು ಎಲ್ಲರಿಗೂ ಇಷ್ಟವಾಗುತ್ತದೆ. ಪ್ರಾಣಿ, ಪಕ್ಷಿಗಳ ಕೂಗು, ಗಿಡ ಮರಗಳ ಸದ್ದು ಸೇರಿದಂತೆ ಪ್ರಕೃತಿಯ ತುಂಬ ಸಂಗೀತ ಆವರಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ. ಭಾರತ ಸಂಗೀತ ಪ್ರೇಮಿಗಳ ನಾಡಾಗಿದೆ, ಸಂಗೀತದಲ್ಲಿ ಬಹಳಷ್ಟು ವಿದ್ವಾಂಸರು ಹೆಸರು ಮಾಡಿದ್ದಾರೆ. ಜಾನಪದ, ಶಾಸ್ತ್ರೀಯ ಸಂಗೀತದಲ್ಲಿ ಅನೇಕರು ಸಾಧನೆ ಮಾಡಿದ್ದಾರೆ ಎಂದು ತಿಳಿಸಿದ. ಶಾಲಾ ಆಡಳಿತ ಮಂಡಳಿ ಸದಸ್ಯರಾದ ವಿನಾಯಕ ರಾನಡೆ, ಭಾರತಿ ಹೆಗಡೆ, ಸಂಸ್ಥೆಯ ಪ್ರಾಚಾರ್ಯರಾದ ಮಂಜುನಾಥ್, ಸುಗುಣಾ, ಉಮೇಶ್, ಶಿಕ್ಷಕರು, ಪಾಲಕರು, ಯೋಗಾಸಕ್ತರು ಭಾಗವಹಿಸಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಎಂ. ಅನುರಾಧಾ ಸ್ವಾಗತಿಸಿದರು. ಹನುಮನ ಗೌಡ ಪ್ರತಿಜ್ಞಾವಿಧಿ ಬೋಧಿಸಿದರು. ಬಿ.ಪಿ. ಬಸವರಾಜ ವಂದಿಸಿದರು.