

ದಾವಣಗೆರೆ : ರಾಷ್ಟ್ರೋತ್ಥಾನ ವಿದ್ಯಾಲಯ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಮತ್ತು ರಾಷ್ಟ್ರೋತ್ಥಾನ ಸಂಯುಕ್ತ ಪದವಿಪೂರ್ವ ಕಾಲೇಜು ಹಾಗೂ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿದೆ. ನಗರದ ನಿಟ್ಟುವಳ್ಳಿಯ ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆಯ ಆವರಣದಲ್ಲಿ ಬೆಳಗ್ಗೆ 8.15ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಸೂರ್ಯ ನಮಸ್ಕಾರದಿಂದ ಹಿಡಿದು ವಿವಿಧ ಆಸನಗಳನ್ನು ಪ್ರದರ್ಶಿಸುವ ಮೂಲಕ ಸ್ವಸ್ಥ, ಸುಸ್ಥಿರ ಸಮಾಜ ನಿರ್ಮಾಣದ ಸಂಕಲ್ಪ ಮಾಡಲಿದ್ದಾರೆ. ಸಮವಸ್ತ್ರ ಧರಿಸಿ ಬರುವ ವಿದ್ಯಾರ್ಥಿಗಳು, ಮ್ಯಾಟ್ ಮೇಲೆ ಯೋಗ ಪ್ರದರ್ಶನ ನೀಡಲಿದ್ದಾರೆ. 35-40 ನಿಮಿಷಗಳ ಕಾಲ ಏಕಾಗ್ರತೆಯಿಂದ ಪಾಲ್ಗೊಂಡು ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ಯೋಗ ಎಂಬ ಸಂದೇಶ ಸಾರಲಿದ್ದಾರೆ. ಪಾಲಕರು, ಶಿಕ್ಷಕರು, ಸಂಸ್ಥೆಯ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಸಂಸ್ಥೆಯ ಆವರಣದಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಯೋಗ ಪ್ರದರ್ಶನ ಹಾಗೂ ವೇದಿಕೆ ಕಾರ್ಯಕ್ರಮಕ್ಕಾಗಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀ ಪರಮಹಂಸ ಅಥರ್ವ ಆಯುರ್ಧಾಮದ ಸಂಸ್ಥಾಪಕ ಡಾ. ಮಲ್ಲಿಕಾರ್ಜುನ ಡಂಬಳ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಉತ್ತರ ವಿಭಾಗದ ರಾಷ್ಟ್ರೋತ್ಥಾನ ಸಿ.ಬಿ.ಎಸ್.ಇ ಶಾಲೆಗಳ ಆಡಳಿತ ಪ್ರಮುಖ ಹಾಗೂ ದಾವಣಗೆರೆ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಕಾರ್ಯದರ್ಶಿ ಎಚ್. ಜಯಣ್ಣ, ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ. ನವೀನ್ ಉಪಸ್ಥಿತರಿರಲಿದ್ದಾರೆ. ಯೋಗ ದಿನದ ಜತೆಗೆ ವಿಶ್ವ ಸಂಗೀತ ದಿನವೂ ಆಗಿರುವುದರಿಂದ ಸಂಸ್ಥೆಯ ವಿದ್ಯಾರ್ಥಿಗಳು ಸಂಗೀತ ಪ್ರದರ್ಶನ ನೀಡಲಿದ್ದಾರೆ. ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಶಾಂತಿ ಮಂತ್ರದೊಂದಿಗೆ ಮುಕ್ತಾಯವಾಗಲಿದೆ.