

ದಾವಣಗೆರೆ : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ಹಾಗೂ ವಿವಿಧ ಯೋಗ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಶನಿವಾರ ನಗರದ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 3 ಸಾವಿರಕ್ಕೂ ಹೆಚ್ಚು ಯೋಗಾಸಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಬೆಳಗ್ಗೆ 5.30 ರಿಂದ 6 ಗಂಟೆಯ ವರೆಗೆ ಬ್ರಹ್ಮಾಕುಮಾರಿ ಈಶ್ವರೀಯ ವಿವಿ ಅವರಿಂದ ಧ್ಯಾನ, 6 ಗಂಟೆಯಿಂದ 6.20 ರ ವರೆಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯವರಿಂದ ಅಷ್ಟ ನಮಸ್ಕಾರ. 6.20 ರಿಂದ 6.55 ರ ವರೆಗೆ ಉದ್ಘಾಟನೆ ಮತ್ತು ವೇದಿಕೆ ಕಾರ್ಯಕ್ರಮ. 7 ಗಂಟೆಯಿಂದ 7.45ರ ವರೆಗೆ ಸಾಮಾನ್ಯ ಯೋಗ ಶಿಷ್ಟಾಚಾರ ನಡೆಯಲಿದೆ ಎಂದು ಮಾಹಿತಿ ನೀಡಿದರು. ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಎಂಬುದು ಈ ಬಾರಿಯ ಘೋಷ ವಾಕ್ಯವಾಗಿದೆ. ಎಲ್ಲ ಯೋಗ ಸಂಘ ಸಂಸ್ಥೆಗಳು ಭಾಗವಹಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೆರವೇರಿಸಲಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಜಿಲ್ಲೆಯ ಶಾಸಕರು ಇನ್ನಿತರ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು. ಜಿ.ಪಂ. ನೂತನ ಸಿಇಒ ಗಿಟ್ಟೆ ಮಾಧವ ವಿಠ್ಠಲ ರಾವ್, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಯು. ಯೋಗೇಂದ್ರ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.