

ದಾವಣಗೆರೆ : ಯೋಗದ ಸೌಂದರ್ಯ, ಅದಕ್ಕಿರುವ ಶಕ್ತಿ, ನಮ್ಮ ದೈಹಿಕ, ಮಾನಸಿಕ ಆರೋಗ್ಯಕ್ಕೆ ಅದು ಎಷ್ಟು ಅವಶ್ಯಕ ಎಂಬುದನ್ನು ಆ ವಿದ್ಯಾರ್ಥಿಗಳು ಯೋಗ ಪ್ರದರ್ಶನದ ಮೂಲಕ ನಿರೂಪಿಸಿದರು. ನಮ್ಮ ಹಿರಿಯರು ಹಾಕಿಕೊಟ್ಟ ಪುರಾತನ ಪದ್ಧತಿ ಇಂದಿಗೂ ಪ್ರಸ್ತುತವಾಗಿದೆ. ಒತ್ತಡದ ಜೀವನಶೈಲಿಯ ನಡುವೆ ಯೋಗ ನಮ್ಮಲ್ಲಿ ಚೈತನ್ಯ ತುಂಬುತ್ತದೆ ಎನ್ನುವ ಸಂದೇಶವನ್ನು ರವಾನಿಸಿದರು.
ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಮತ್ತು ವಿದ್ಯಾಲಯ ಹಾಗೂ ರಾಷ್ಟ್ರೋತ್ಥಾನ ಕಾಂಪೊಸಿಟ್ ಪಿಯು ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಿಟ್ಟುವಳ್ಳಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ 1 ಸಾವಿರಕ್ಕೂ ಹೆಚ್ಚು ಮಕ್ಕಳು ಯೋಗ ಪ್ರದರ್ಶನ ನೀಡಿದರು.
ಯೋಗ ಶಿಕ್ಷಕ ರಮೇಶ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಪದ್ಮಾಸನ, ಚಿನ್ಮುದ್ರೆಯೊಂದಿಗೆ ಆರಂಭಿಸಿದರು. ಓಂಕಾರ ಮಂತ್ರ ಪಠಿಸಿದರು. ನಂತರ ಕಪಾಲಬಾತಿ ಕ್ರಿಯೆ ಮಾಡಿದರು.
ವಜ್ರಾಸನ, ಊರ್ಧ್ವಾಸನ, ಅಶ್ವಸಂಚಾಲಾಸನ, ತಾಡಾಸನ, ಹಸ್ತ ಪಾದಾಸನ, ದಂಡಾಸನ, ಭುಜಂಗಾಸನ, ಪರ್ವತಾಸನ, ಅರ್ಧ ಚಕ್ರಾಸನ, ಮಕರಾಸನ, ಧನುರಾಸನ, ಸೇತು ಬಂಧಾಸನ, ಶವಾಸನ ಹೀಗೆ ಬಗೆ ಬಗೆಯ ಆಸನಗಳನ್ನು ಮಕ್ಕಳು ಆಸಕ್ತಿಯಿಂದ ಮಾಡಿದರು.
ಧ್ಯಾನ, ಪ್ರಾಣಾಯಾಮ, ಉಸಿರಾಟ ನಿಯಂತ್ರಣ, ನಮಸ್ಕಾರ ಮುದ್ರೆ, ಆಗಾಗ ಸಮ ಸ್ಥಿತಿಗೆ ಮರಳುತ್ತಿದ್ದರು. ಮೃತ್ಯುಂಜಯ ಮಂತ್ರ, ಗಾಯತ್ರಿ ಮಂತ್ರ ಜಪಿಸಿ, ಶಿವನ ಸ್ತುತಿ ಮಾಡಿದರು. ಆರಂಭದಲ್ಲಿ ಶಿಕ್ಷಕಿ ವೀಣಾ ಪ್ರಸಾದ್ ಯೋಗ ಗೀತೆಯನ್ನು ಪ್ರಸ್ತುತ ಪಡಿಸಿದರು. ವಿದ್ಯಾರ್ಥಿಗಳಾದ ಭಗವತ್ ಪ್ರಸಾದ್, ವೈ.ಆರ್. ಭೂಮಿಕಾ, ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆಸಿಕೊಟ್ಟ ರಿದಮಿಕ್ ಯೋಗ ಗಮನ ಸೆಳೆಯಿತು.