

ದಾವಣಗೆರೆ ಬೆಲೆ ಏರಿಕೆ ಸೇರಿ ರಾಜ್ಯ ಸರ್ಕಾರದ ನೀತಿಗಳನ್ನು ವಿರೋಧಿಸಿ ಬಿಜೆಪಿಯಿಂದ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆ ಸೋಮವಾರ ನಗರಕ್ಕೆ ಆಗಮಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 10 ಗಂಟೆಗೆ ಜಯದೇವ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ. 25 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ಯಾತ್ರೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ. ಶ್ರೀರಾಮುಲು, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಮುಂತಾದವರು ಭಾಗವಹಿಸುವರು ಎಂದರು. ಆರಂಭದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಗುವುದು. ಪ್ರತಿಭಟನಾ ಸಭೆಯ ನಂತರ ಅಶೋಕ ರಸ್ತೆ ಮೂಲಕ ಮಹಾತ್ಮ ಗಾಂಧಿ ವೃತ್ತ, ಆರ್.ಎಚ್. ಛತ್ರದ ಮುಂಭಾಗದಿಂದ ಉಪ ವಿಭಾಗಾಧಿಕಾರಿ ಕಚೇರಿ ತಲುಪಲಿದೆ ಎಂದು ಮಾಹಿತಿ ನೀಡಿದರು. ಯಾತ್ರೆಯು ಸಾಗುವ ಮಾರ್ಗದಲ್ಲಿ ಬಿಜೆಪಿಯ ಬಾವುಟ, ಬ್ಯಾನರ್, ಬಂಟಿಂಗ್, ಫ್ಲೆಕ್ಸ್‌ಗಳನ್ನು ಅಳವಡಿಸಿ ಅಲಂಕಾರ ಮಾಡಲಾಗುತ್ತಿದೆ. ಭಾಗವಹಿಸುವವರಿಗೆ ಮಜ್ಜಿಗೆ, ನೀರಿನ ವ್ಯವಸ್ಥೆಯೂ ಇರಲಿದೆ ಎಂದರು. ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಮಾಜಿ ಸಂದರು ಸೇರಿ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು. ... * ಔಟ್ ಗೋಯಿಂಗ್ ಸರ್ಕಾರ ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿಯಾಗಿದ್ದು ತನ್ನ ನೀತಿಗಳಿಂದಾಗಿ ಪತನವಾಗಲಿದೆ. ಇದು ಔಟ್ ಗೋಯಿಂಗ್ ಸರ್ಕಾರವಾಗಿದ್ದು ಮುಂದೆ ಬಿಜೆಪಿಯದು ಇನ್‌ಕಮಿಂಗ್ ಸರ್ಕಾರ ಎಂದು ಮಾಜಿ ಸಚಿವ ಎಂ. ರೆಣುಕಾಚಾರ್ಯ ಹೇಳಿದರು. ಈ ಸರ್ಕಾರ ‘ಹೋದ ಪುಟ್ಟ, ಬಂದ ಪುಟ್ಟ’ ಎನ್ನುವಂತೆ ಕೆಲಸ ಮಾಡುತ್ತಿದೆ. 50 ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತುಘಲಕ್ ದರ್ಬಾರ್ ಮಾಡಿದರೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ. ಇದರಿಂದ ಜನ ಸಾಮಾನ್ಯರು ಬೇಸತ್ತಿದ್ದಾರೆ ಎಂದು ಹೇಳಿದರು. ... * ಜನ ಅವರನ್ನು ಮರೆತಿದ್ದಾರೆ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರನ್ನು ಕರೆದಿಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿದ ರೇಣುಕಾಚಾರ್ಯ, ಪಕ್ಷದ ಕಾರ್ಯಕ್ರಮಗಳಿದ್ದಾಗ ಜಿಲ್ಲಾಧ್ಯಕ್ಷರು ಅವರನ್ನು ಕರೆದಿದ್ದಾರೆ. ಅದಕ್ಕೆ ದಾಖಲೆಗಳೂ ಇವೆ. ಅದಕ್ಕಿಂತ ಹೆಚ್ಚಾಗಿ ಪಕ್ಷದ ಮೇಲಿನ ಗೌರವದಿಂದ ಸ್ವಯಂ ಪ್ರೇರಣೆಯಿಂದ ಬರಬೇಕು. ಅದು ಅವರ ಕರ್ತವ್ಯ ಎಂದರು. ಚುನಾವಣೆಯ ಟಿಕೆಟ್‌ಗೆ ಲಾಬಿ ಮಾಡಲು ಓಡಾಡಲ್ಲಿಲ್ಲವೆ?. ರಾಜ್ಯಧ್ಯಕ್ಷರ ವಿರುದ್ಧ ಭಿನ್ನಮತೀಯ ಚಟುವಟಿಕೆ ನಡೆಸಿದರು. ಅವರ ಸೋಲಿಗೆ ಅವರೇ ಕಾರಣ. ಜನ ಅವರನ್ನು ಮರೆತಿದ್ದಾರೆ. 6 ಬಾರಿ ಜನ ಗೆಲ್ಲಿಸಿದರು, ಅವರು ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿದರು. ಟೀಕೆ ಮಾಡುವುದನ್ನು ಬಿಟ್ಟು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು. ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಮಾಜಿ ಶಾಸಕ ಎಂ. ಬಸವರಾಜ ನಾಯ್ಕ, ಮುಖಂಡರಾದ ಮಾಡಾಳು ಮಲ್ಲಿಕಾರ್ಜುನ್, ಲೋಕಿಕೆರೆ ನಾಗರಾಜ, ಬಿ.ಎಂ. ಸತೀಶ್, ಧನಂಜಯ ಕಡ್ಲೇಬಾಳ್, ಅಣ್ಣೇಶ್, ಅನಿಲ್ ನಾಯ್ಕ, ರಘು ಅಂಬರ್‌ಕರ್ ಸುದ್ದಿಗೋಷ್ಠಿಯಲ್ಲಿದ್ದರು.