ಏಪ್ರಾನ್ ತೂಗು ಹಾಕಿ ಸಾಂಕೇತಿಕ ಪ್ರತಿಭಟನೆ

dvg jjm july 12-3
Published on

ದಾವಣಗೆರೆ: ಶಿಷ್ಯವೇತನ ಬಿಡುಗಡೆಗೆ ಆಗ್ರಹಿಸಿ 14 ದಿನಗಳಿಂದ ಹೋರಾಟ ನಡೆಸುತ್ತಿರುವ ಜೆಜೆಎಂ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾನುವಾರ ಸಾಂಕೇತಿಕ ಹೋರಾಟ ನಡೆಸಿದರು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಯದೇವ ವೃತ್ತದ ಧರಣಿ ಸ್ಥಳದಲ್ಲಿ ತಮ್ಮ ಏಪ್ರಾನ್‌ಗಳನ್ನು ಹಗ್ಗವೊಂದಕ್ಕೆ ತೂಗು ಹಾಕುವ ಮೂಲಕ ಪ್ರತಿಭಟಿಸಿದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನೆ ನಡೆಸದಂತೆ ವಿದ್ಯಾರ್ಥಿಗಳಿಗೆ ಸೂಚಿಸಿ ಅಲ್ಲಿಂದ ಕಳುಹಿಸಿದರು.

ಲಾಕ್‌ಡೌನ್ ಕುರಿತ ಸರ್ಕಾರದ ಮಾರ್ಗಸೂಚಿಗೆ ಬದ್ಧರಾಗಿ ನಾವು ಸಾಂಕೇತಿಕ ಹೋರಾಟ ನಡೆಸಿದ್ದೇವೆ. ನಮಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಿಲ್ಲದು ಎಂದು ವೈದ್ಯ ವಿದ್ಯಾರ್ಥಿನಿ ಡಾ.ಮೇಘನಾ ತಿಳಿಸಿದರು.

ಜೆಜೆಎಂನ ಬಾಲಕರ ಹಾಗೂ ಬಾಲಕಿಯರ ಹಾಸ್ಟೆಲ್‌ನಲ್ಲೂ ವಿದ್ಯಾರ್ಥಿಗಳು ಕಣ್ಣಿಗೆ ಕಪ್ಪು ಬಟ್ಟೆ ಧರಿಸಿ, ಕಿವಿಗಳಿಗೆ ಕೈ ಮುಚ್ಚಿಕೊಂಡು ಸರ್ಕಾರಕ್ಕೆ ಕಣ್ಣಿಲ್ಲ, ಕಿವಿಯೂ ಇಲ್ಲ ಎಂದು ವ್ಯಂಗ್ಯವಾಡಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮುಷ್ಕರ ನಿರತ ವಿದ್ಯಾರ್ಥಿಗಳನ್ನು ಡಿಸಿ ಕಚೇರಿಗೆ ಕರೆಸಿಕೊಂಡ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರೊಂದಿಗೆ ಸಮಾಲೋಚಿಸಿದರು. ಸರ್ಕಾರದ ಸೂಚನೆಯಂತೆ ಪ್ರತಿಭಟನೆ ಹಿಂಪಡೆಯಲು ಮನವಿ ಮಾಡಿದರು.

ಸಿಎಂ ಬಿ.ಎಸ್.ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹಾಗೂ ವಿಜಯೇಂದ್ರ ಅವರೊಂದಿಗೆ ಸಭೆ ನಡೆದಿದ್ದು, ಕಾಲೇಜು ಆಡಳಿತ ಮಂಡಳಿಯೇ ಶಿಷ್ಯವೇತನ ನೀಡುವಂತೆ ಸಿಎಂ ಸೂಚಿಸಿದ್ದಾರೆ. ಹಾಗಾಗಿ ಪ್ರತಿಭಟನೆ ಕೈಬಿಡಿ ಎಂದು ಡಿಸಿ ಹೇಳಿದರು.

‘ಪ್ರತಿಭಟನೆ ಆರಂಭದ ದಿನದಿಂದಲೇ ನಮ್ಮ ನಿರ್ಧಾರ ಪ್ರಕಟಿಸಿದ್ದೇವೆ. ಸರ್ಕಾರ ಅಥವಾ ಸಚಿವರು ಲಿಖಿತ ಆದೇಶ ನೀಡಬೇಕು. ಇಲ್ಲವೇ ಪತ್ರಿಕಾಗೋಷ್ಠಿ ಕರೆದು ವಿವರಣೆ ನೀಡಬೇಕು. ಅದು ಬರದೆ ತಾವು ಪ್ರತಿಭಟನೆ ನಿಲ್ಲಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದೇವೆ. ಅದರಂತೆ ಹೋರಾಟ ಮುಂದುವರಿಯಲಿದೆ ಎಂದು ವೈದ್ಯ ವಿದ್ಯಾರ್ಥಿ ಡಾ.ಜಿ.ಎ.ಸುಧಾಕರ್ ಪತ್ರಿಕೆಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net