

ದಾವಣಗೆರೆ : ನಗರದ ನಾಗರಿಕರಿಗೆ ದಿನದ 24 ಗಂಟೆ ಕುಡಿಯುವ ನೀರು ಪೂರೈಸುವ ಜಲಸಿರಿ ಯೋಜನೆಯು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಹೇಳಿದರು. ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ, ‘ನಾವೀನ್ಯತೆಗಳ ಮೂಲಕ ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಸುಸ್ಥಿರ ಅಭಿವೃದ್ಧಿ ಹಾಗೂ ಭವಿಷ್ಯದ ಪ್ರವೃತ್ತಿಗಳು’ ವಿಷಯದ ಕುರಿತ ಮೂರು ದಿನಗಳ ಕಾರ್ಯಾಗಾರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಯೋಜನೆಯು ಪ್ರಗತಿಯಲ್ಲಿದೆ. ಪಾಲಿಕೆ ವ್ಯಾಪ್ತಿಯ ಎಲ್ಲ 45 ವಾರ್ಡ್‌ಗಳಲ್ಲೂ 24*7 ನೀರು ಸರಬರಾಜು ಆರಂಭವಾಗಲಿದೆ ಎಂದು ತಿಳಿಸಿದರು. ರಸ್ತೆ, ಚರಂಡಿ, ತ್ಯಾಜ್ಯ ನಿರ್ವಹಣೆ ಸೇರಿ ಯಾವುದೇ ಯೋಜನೆಗಳ ಅನುಷ್ಠಾನದಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ. ಇಂಜಿನಿಯರುಗಳಿಂದಾಗಿಯೇ ಇದೆಲ್ಲ ಸಾಧ್ಯವಾಗಿದೆ ಎಂದು ತಿಳಿಸಿದರು. ಸ್ವಚ್ಛ ಸರ್ವೇಕ್ಷಣೆಯಲ್ಲಿ ದಾವಣಗೆರೆಗೆ ರಾಷ್ಟ್ರಮಟ್ಟದ ಪ್ರಸಸ್ತಿ ಲಭಿಸಿದೆ. ಕಸ ಸಾಗಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ನಗರದಲ್ಲಿ 24 ಸಾವಿರ ಬೀದಿ ದೀಪಗಳಿದ್ದು ತಂತ್ರಜ್ಞಾನ ಬಳಸಿಕೊಂಡು ಅವುಗಳ ನಿರ್ವಹಣೆ ಮಾಡಲಾಗುತ್ತಿದೆ ಎಂದರು. ಸಾರ್ವಜನಿಕರು ಆನ್‌ಲೈನ್ ಮೂಲಕವೇ ತೆರಿಗೆ ಪಾವತಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಹೇಳಿದರು. ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ ಮಾತನಾಡಿ, ಪೊಲೀಸ್ ಇಲಾಖೆಯ ಕಾರ್ಯ ನಿರ್ವಹಣೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ನೆರವಾಗಿದೆ. ಹೆಲ್ಮೆಟ್ ರಹಿತ ಸವಾರಿ, ಹಾಫ್ ಹೆಲ್ಮೆಟ್ ಧರಿಸುವುದು, ಒಮ್ಮುಖ ರಸ್ತೆಯಲ್ಲಿ ತೆರಳುವುದು ಸೇರಿ ಸಂಚಾರ ನಿಯಮಗಳ ಉಲ್ಲಂಘನೆಯನ್ನು ಎಎನ್‌ಪಿಆರ್ ಕ್ಯಾಮರಾಗಳ ನೆರವಿನಿಂದ ಪತ್ತೆಹಚ್ಚಲಾಗುತ್ತಿದೆ ಎಂದು ಹೇಳಿದರು. ಅಪರಾಧ ಪ್ರಕರಣ ಆರೋಪಿಗಳ ಚಹರೆ ಪತ್ತೆಗೆ ಎಐ ಸಹಾಯಕವಾಗುತ್ತದೆ. ಇತ್ತೀಚೆಗೆ ಸೈಬರ್ ಅಪರಾಧಗಳು ಜಾಸ್ತಿಯಾಗಿವೆ. ವಿದ್ಯಾವಂತರೇ ಮೋಸ ಹೋಗುತ್ತಿದ್ದಾರೆ. ಇಂಥ ಕೇಸ್‌ಗಳನ್ನು ಭೇದಿಸಲು ತಂತ್ರಜ್ಞಾನ ವರವಾಗಿದೆ. ವಂಚಿಸಲಾದ ಹಣ ಯಾವ ಬ್ಯಾಂಕಿನಿಂದ ಎಲ್ಲಿಗೆ ವರ್ಗಾವಣೆಯಾಗಿದೆ ಎಂಬುದನ್ನು ಪತ್ತೆಹಚ್ಚಿ ಆ ಹಣ ಆರೋಪಿಗಳ ಕೈಸೇರದಂತೆ ಮಾಡಲು ಸಾಧ್ಯ ಎಂದರು. ಕಾರ್ಯಾಗಾರದ ಸಂಯೋಜಕ ಡಾ. ಬಿ. ಸುರೇಶ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.ಎನ್.ಎಸ್. ಬಸವರಾಜಪ್ಪ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಟಿ.ಕೆ. ಕೃಷ್ಣಕುಮಾರ ನಿರೂಪಿಸಿದರು. ಶ್ರೀನಿಧಿ ಆರ್. ಕುಲಕರ್ಣಿ ಪ್ರಾರ್ಥಿಸಿದರು.