ಬದಲಾವಣೆ ತರಲು ಸವಾಲು ಮೆಟ್ಟಿ ನಿಲ್ಲಿ

dvg-workshop_20250813231603260.jpg
Published on

ದಾವಣಗೆರೆ  : ಸ್ವಯಂ ಸೇವಾ ಸಂಸ್ಥೆಗಳು ಸವಾಲುಗಳನ್ನು ಮೆಟ್ಟಿ ನಿಂತು ಸಮಾಜದಲ್ಲಿ ಬದಲಾವಣೆ ತರಬೇಕು ಎಂದು ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ರಶ್ಮಿ ರೇಖಾ ಹೇಳಿದರು.  ಕರ್ನಾಟಕ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟ (ಫೆವಾರ್ಡ್-ಕ) ವತಿಯಿಂದ ನಗರದ ರಂಗಮಹಲ್‌ನಲ್ಲಿ ಬುಧವಾರ ಆಯೋಜಿಸಿದ್ದ, ಶಿವಮೊಗ್ಗ ವಿಭಾಗೀಯ 6 ಜಿಲ್ಲೆಗಳ ಸ್ವಯಂಸೇವಾ ಸಂಸ್ಥೆಗಳ 5 ವರ್ಷಗಳ (2025-30) ಕಾರ್ಯತಂತ್ರ, ನೀತಿ ನಿರೂಪಣ ಕಾರ್ಯಾಗಾರದಲ್ಲಿ ಮಾತನಾಡಿದರು.  ಹೊಸತನಕ್ಕಾಗಿ ತುಡಿಯಬೇಕು. ಸಾಧನೆಯ ಹಾದಿಯಲ್ಲಿ ಹಲವು ಅಡಚಣೆಗಳು ಬರಬಹುದು, ಎಲ್ಲವನ್ನೂ ಎದುರಿಸಿ ಮುನ್ನುಗ್ಗಬೇಕು. ಆ ಛಲವಿದ್ದಾಗಲೇ ಕೆಲಸದಲ್ಲಿ ಛಾಪು ಮೂಡಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.  ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಗ್ರಾಮೀಣ ಅಭಿವೃದ್ಧಿಗೆ ಮೀಸಲಾಗಿದೆ. ವೈಯಕ್ತಿಕ ಫಲಾನುಭವಿಗಳಿಗೆ ಈ ಬ್ಯಾಂಕ್ ನೆರವು ನೀಡುವುದಿಲ್ಲ. ಸಮುದಾಯದ ಕೆಲಸ ಮಾಡುವ ಸಂಘ ಸಂಸ್ಥೆಗಳಿಗೆ ಹಣಕಾಸು ನೆರವು ನೀಡುತ್ತದೆ. ಆ ಮೂಲಕ ಜನರಿಗೆ ಉಪಯುಕ್ತವಾದ ಕೆಲಸಗಳು ಆಗುವಂತೆ ನೊಡಿಕೊಳ್ಳುತ್ತದೆ ಎಂದು ತಿಳಿಸಿದರು.  ರಸ್ತೆ, ಜಲಾಶಯ ನಿರ್ಮಾಣ, ಶಾಲೆ, ಅಂಗನವಾಡಿ ಇನ್ನಿತರ ಯೋಜನೆಗಳನ್ನು ಕೈಗೊಳ್ಳಲು ನಬಾರ್ಡ್ ರಾಜ್ಯ ಸರ್ಕಾರಕ್ಕೂ ಆರ್ಥಿಕ ಸಹಾಯ ನೀಡುತ್ತ ಬಂದಿದೆ. ರೈತ ಉತ್ಪಾದಕ ಸಂಘಗಳಿಗೂ (ಎಫ್‌ಪಿಒ) ನೆರವಾಗುತ್ತಿದೆ ಎಂದು ಬ್ಯಾಂಕಿನ ಚಟುವಟಿಕೆಗಳನ್ನು ವಿವರಿಸಿದರು.  ಫೆವಾರ್ಡ್-ಕ ರಾಜ್ಯಾಧ್ಯಕ್ಷ ಮಹೇಶ್‌ಚಂದ್ರ ಗುರು, ವಿಭಾಗೀಯ ಉಪಾಧ್ಯಕ್ಷ ಎಚ್.ಎಫ್. ಅಕ್ಕಿ, ನಿಕಟಪೂರ್ವ ಅಧ್ಯಕ್ಷ ಆಂಜನೇಯ ರೆಡ್ಡಿ, ಜಿಲ್ಲಾಧ್ಯಕ್ಷ ಡಾ. ಮೃತ್ಯುಂಜಯ ಹಿರೇಮಠ್, ದಾವಣಗೆರೆ ಘಟಕದ ಕಾರ್ಯದರ್ಶಿ ಸುರೇಶ್ ಜಲಗಾರ ಇದ್ದರು.  ರವಿಕುಮಾರ್ ಸ್ವಾಗತಿಸಿದರು. ಅಣ್ಣಪ್ಪ ಅಜ್ಜರ್ ಪ್ರಾರ್ಥಿಸಿದರು. ಸಲ್ಮಾಬಾನು ವಂದಿಸಿದರು. ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.  ದಾವಣಗೆರೆ ಅಲ್ಲದೇ ಚಿಕ್ಕಮಗಳೂರು, ಉಡುಪಿ, ಹಾವೇರಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net