

ದಾವಣಗೆರೆ : ಮಹಿಳೆ ಮತ್ತು ಮಕ್ಕಳ ಕಳ್ಳ ಸಾಗಣೆಯ ಜಾಲವು ಹೈಟೆಕ್ ಸ್ವರೂಪ ಪಡೆದಿದೆ. ಇಂದಿನ ಮಕ್ಕಳಿಗೆ ಮೊಬೈಲ್, ಇಂಟರ್‌ನೆಟ್ ಬಗ್ಗೆ ಹೆಚ್ಚಿನ ಒಲವಿರುವುದರಿಂದ ಅದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಮಹಿಳೆ ಮತ್ತು ಮಕ್ಕಳಿಗೆ ಆಸೆ, ಆಮಿಷವೊಡ್ಡಿ ಶೋಷಣೆ ಮಾಡುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ್ ಕಳವಳ ವ್ಯಕ್ತಪಡಿಸಿದರು. ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಸಭಾಂಗಣದಲ್ಲಿ ಬುಧವಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಸಬಲೀಕರಣ, ಸುಧಾರಣಾ ಸಂಸ್ಥೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ, ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಲೈಂಗಿಕ ಶೋಷಣೆಗಾಗಿ, ಮಕ್ಕಳ ಒತ್ತಾಯಪೂರ್ವಕ ಭಿಕ್ಷಾಟನೆಗೆ, ಜೀತಕ್ಕೆ, ಬಾಲಕಾರ್ಮಿಕತೆಗೆ, ಅಂಗಾಂಗ ಕಸಿ, ಬಾಲ್ಯ ವಿವಾಹ ಹಾಗೂ ಮದ್ಯ-ಮಾದಕ ವಸ್ತುಗಳ ಸಾಗಾಟಕ್ಕಾಗಿ ಮಾನವ ಕಳ್ಳಸಾಗಣೆ ಮಾಡಲಾಗುತ್ತಿದೆ. ಇಂತಹ ದುಷ್ಕೃತ್ಯಕ್ಕೆ ಮಕ್ಕಳು, ಯುವಕರು, ವಯಸ್ಕರನ್ನು ಸಹ ಬಳಸಿಕೊಳ್ಳಲಾಗುತ್ತಿದೆ. ಆದ್ದರಿಂದ ಅಧಿಕಾರಿಗಳು ಪ್ರಕರಣಗಳನ್ನು ಭೇದಿಸುವಲ್ಲಿ ಹದ್ದಿನ ಕಣ್ಣಿಡಬೇಕಾಗಿದೆ ಎಂದು ತಿಳಿಸಿದರು. ವಿಶೇಷವಾಗಿ ಗ್ರಾಮ, ಹೋಬಳಿ ಹಾಗೂ ತಾಂಡಾಗಳಲ್ಲಿ ಈ ಕುರಿತು ಅರಿವು ಮೂಡಿಸಬೇಕು. ಉತ್ತಮ ಸಮಾಜ ನಿರ್ಮಿಸುವಲ್ಲಿ ತಾವೆಲ್ಲರೂ ಕೈ ಜೋಡಿಸಬೇಕು ಎಂದರು. ಮಕ್ಕಳ ರಕ್ಷಣಾ ಆಯೋಗದ ಸದಸ್ಯರು ಹಾಗೂ ಜಿಲ್ಲಾ ಮಾನವ ಕಳ್ಳ ಸಾಗಾಣಿಕೆ ತಡೆ ಸಮಿತಿ ಸದಸ್ಯ ರೂಪ ನಾಯ್ಕ್ ಮಾತನಾಡಿ, ಮಕ್ಕಳು ಶಾಲೆಯಿಂದ ಹೊರಗುಳಿಯುವುದು, ವಿವಿಧ ಕಾರಣಗಳಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ. ಇಲ್ಲಿ ಮಾನವ ಹಕ್ಕುಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಆದ್ದರಿಂದ ಸ್ಥಳೀಯ ಆಡಳಿತ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ಶಾಲಾ ಮಟ್ಟದಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕಿದೆ ಎಂದು ಹೇಳಿದರು. ಭಾರತ ಮುಂದುವರಿಯುತ್ತಿರುವ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಆದರೆ ಇಂದಿಗೂ ಭಿಕ್ಷಾಟನೆ ದೃಶ್ಯಗಳು ಕಂಡುಬರುತ್ತಿವೆ. ಆರ್ಥಿಕ ಮತ್ತು ಸಾಮಾಜಿಕವಾಗಿ ಬಲಹೀನ ಆಗಿರುವುದರಿಂದಲೇ ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ ಸಾರ್ವಜನಿಕರಿಗೆ ಬಡತನ, ನೈಜ ಬದುಕಿನ ಬಗ್ಗೆ ಮತ್ತಷ್ಟು ಅರಿವು ಅಗತ್ಯ ಎಂದರು. ವಕೀಲೆ ಅನಿತಾ. ಸಿ.ಪಿ. ಅವರು ಉಪನ್ಯಾಸ ನೀಡಿದರು. ರಾಜ್ಯ ಮಾನವ ಕಳ್ಳಸಾಗಾಣಿಕೆ ತಡೆಗಟ್ಟುವ ಸಮಿತಿ ಸದಸ್ಯ ರಾಜೇಂದ್ರನ್.ಎ. ಜಿಲ್ಲಾ ನಿರೂಪಣಾಧಿಕಾರಿ ಗುರುಪ್ರಸಾದ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಾಧಿಕಾರಿ ಪ್ರಕಾಶ್, ಮಹಿಳಾ ಠಾಣೆ ಇನ್ಸ್ಪೆಕ್ಟರ್ ಆಶಾ ಇದ್ದರು. ...