ಜಿಲ್ಲೆಯಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಅಧಿಕ

dvg-one-stop-center.jpg
Published on

ದಾವಣಗೆರೆ : ಜಿಲ್ಲೆಯಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಅಧಿಕವಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಡಾ.ಅರ್ಚನಾ ಮಜುಮ್‌ದಾರ್ ಕಳವಳ ವ್ಯಕ್ತಪಡಿಸಿದರು.  ಚಿಗಟೇರಿ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಸಖಿ ಒನ್ ಸ್ಟಾಪ್ ಸೆಂಟರ್‌ಗೆ ಸೋಮವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.  ದೇಶದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಪ್ರತಿ ಸಾವಿರ ಜನರಲ್ಲಿ ವರ್ಷಕ್ಕೆ 7ಕ್ಕಿಂತ ಕಡಿಮೆ ಇದೆ. ಆದರೆ ಜಿಲ್ಲೆಯ ಅಂಕಿ ಅಂಶಗಳು ಆತಂಕಕಾರಿಯಾಗಿವೆ ಎಂದು ತಿಳಿಸಿದರು.  ಚಿಗಟೇರಿ ಜಿಲ್ಲಾಸ್ಪತ್ರೆಗೆ ಸುತ್ತಲಿನ ನಾಲ್ಕೈದು ಜಿಲ್ಲೆಗಳಿಂದ ರೋಗಿಗಳು ಬರುವುದರಿಂದ ಈ ಸಂಖ್ಯೆ ಹೆಚ್ಚಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ 18 ವರ್ಷದ ಒಳಗಿನವರು ಗರ್ಭಿಣಿಯಾಗುವುದು ತಪ್ಪಬೇಕು ಎಂದು ಹೇಳಿದರು.  ಎಲ್ಲ ಪೊಲೀಸ್ ಠಾಣೆಗಳಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತವೆ. ಸಖಿ ಒನ್ ಸ್ಟಾಪ್ ಸೆಂಟರ್‌ನ ಸಿಬ್ಬಂದಿ, ಠಾಣೆಗಳಿಂದ ಅವುಗಳ ಮಾಹಿತಿ ಪಡೆದುಕೊಂಡು ಮಹಿಳೆಯರಿಗೆ ನೆರವಾಗಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಪೋಕ್ಸೋ ಕೇಸ್‌ಗಳೂ ಜಾಸ್ತಿ ಇವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.  ಸಖಿ ಒನ್ ಸ್ಟಾಪ್ ಸೆಂಟರ್‌ನ ಒಳಗೆ ಸುತ್ತು ಹಾಕಿದ ಅವರು, ಅಲ್ಲಿನ ಅಡುಗೆ ಕೋಣೆ, ಶೌಚಗೃಹ, ಸಭಾಂಗಣ, ಮಲಗುವ ಕೋಣೆ ಪರಿಶೀಲಿಸಿದರು. ಎಷ್ಟು ಮಹಿಳೆಯರು ದಾಖಲಾಗುತ್ತಾರೆ, ಸಿಬ್ಬಂದಿಯ ಸಂಖ್ಯೆ ಎಷ್ಟು ಎಂದು ಪ್ರಶ್ನಿಸಿದರು.  ಕೌನ್ಸಿಲರ್‌ಗಳು, ವಕೀಲರು, ಸೋಷಿಯಲ್ ವರ್ಕರ್ ಸೇರಿ 8 ಜನ ಸಿಬ್ಬಂದಿ ಇದ್ದಾರೆ ಎಂದು ಸೆಂಟರ್‌ನ ಅಧಿಕಾರಿ ಮಾಹಿತಿ ನೀಡಿದರು.  ತಾವರೆಕೆರೆಯಲ್ಲಿ ಇತ್ತೀಚೆಗೆ ಮಹಿಳೆಯ ಮೇಲೆ ಸಾರ್ವಜನಿಕವಾಗಿ ನಡೆದ ಹಲ್ಲೆಯ ಬಗ್ಗೆ ಪ್ರಸ್ತಾಪಿಸಿ, ಅಲ್ಲಿನ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ಅವರು ಸಹಿಸಿಕೊಂಡು ಮೌನವಾಗಿದ್ದಾರೆ. ಸರ್ಕಾರದ ಯೋಜನೆಗಳ ಬಗ್ಗೆ ಅವರಿಗೆ ಜಾಗೃತಿ ಮೂಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.  ಮಕ್ಕಳಿಗೆ ವಿದ್ಯಾರ್ಥಿವೇತನ, ಮನೆಯಿಂದ ಹೊರಗೆ ಕಳಿಸಲಾದ ಮಹಿಳೆಯರಿಗೆ ಆಶ್ರಯ, ಸಖಿ ಒನ್ ಸ್ಟಾಪ್ ಸೆಂಟರ್ ಹೀಗೆ ಹಲವು ಸೌಲಭ್ಯಗಳಿವೆ. ಅವುಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಬೇಕು. ಮಹಿಳೆಯರು ತಮ್ಮ ಮೇಲೆ ದೌರ್ಜನ್ಯಗಳಾದಾಗ ಆಯೋಗದ ಸಹಾಯವಾಣಿಯನ್ನು ನೇರವಾಗಿ ಸಂಪರ್ಕಿಸಬಹುದು ಎಂದು ತಿಳಿಸಿದರು.  ...  (ಬಾಕ್ಸ್)  ಪ್ರಧಾನಿಗೆ ಆಯೋಗದ ಪತ್ರ  ಹದಿನೆಂಟು ವರ್ಷದ ಒಳಗಿನವರು ಮದುವೆಯಾಗುವುದು (ಬಾಲ್ಯವಿವಾಹ) ಮತ್ತು ಗರ್ಭ ಧರಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ರಿವು ಮೂಡಿಸುವ ಪಠ್ಯಕ್ರಮವನ್ನು ಶಾಲಾ ಹಂತದಲ್ಲಿ ಅಳವಡಿಸುವಂತೆ ಆಯೋಗವು ಪ್ರಧಾನಿ ಅವರಿಗೆ ಪತ್ರ ಬರೆದಿದೆ ಎಂದು ಡಾ.ಅರ್ಚನಾ ಮಜುಮ್‌ದಾರ್ ತಿಳಿಸಿದರು.  ಹೊಸ ಶಿಕ್ಷಣ ನೀತಿಯಲ್ಲಿ ಇದನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು. 18 ವರ್ಷದ ಒಳಗಿನವರು ಮದುವೆಯಾದರೆ ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಜತೆಗೆ ಪರಿಸ್ಥಿತಿಯನ್ನು ಎದುರಿಸುವ ಪಕ್ವತೆ ಅವರಿಗೆ ಇನ್ನೂ ಬಂದಿರುವುದಿಲ್ಲ. ಪಠ್ಯಕ್ರಮದಲ್ಲಿ ಈ ವಿಷಯ ಸೇರ್ಪಡೆಯಾದರೆ ಮಕ್ಕಳಲ್ಲಿ ಜಾಗೃತಿ ಮೂಡುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net