ರೈತ ಮಹಿಳೆಯೇ ನಿಜವಾದ ಸೆಲೆಬ್ರಿಟಿ

dvg-university_20250306003710463.jpg
Published on

ದಾವಣಗೆರೆ : ಮುಖಕ್ಕೆ ಬಣ್ಣ ಹಾಕಿಕೊಂಡು ನಟಿಸುವ ಚಿತ್ರ ಕಲಾವಿದರಿಗಿಂತ ರೈತರು, ರೈತ ಮಹಿಳೆಯರೇ ನಿಜವಾದ ಸೆಲೆಬ್ರಿಟಿಗಳು. ಅವರನ್ನು ಗೌರವಿಸುವುದೇ ಶ್ರೇಷ್ಠ ಎಂದು ಚಿತ್ರನಟಿ ಆದಿತಿ ಪ್ರಭುದೇವ ಅಭಿಪ್ರಾಯಪಟ್ಟರು.  ದಾವಣಗೆರೆ ವಿಶ್ವವಿದ್ಯಾಲಯ ವ್ಯವಹಾರ ನಿರ್ವಹಣೆ ಅಧ್ಯಯನ ವಿಭಾಗದ ವತಿಯಿಂದ ಬುಧವಾರ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ಕಲಾವಿದರಿಗೆ ಹವಾನಿಯಂತ್ರಿತ ಕೊಠಡಿ, ಸುರಕ್ಷಿತ ವಾತಾವರಣ ಇರುತ್ತದೆ. ಆದರೆ ರೈತರು ಬಿಸಿಲು, ಮಳೆ, ಚಳಿ, ಗಾಳಿ ಎನ್ನದೇ ಕಷ್ಟಪಟ್ಟು ದುಡಿದು, ಬೆವರು ಸುರಿಸಿ ಸಾವಿರಾರು ಜನರಿಗೆ ಅನ್ನವನ್ನು ನೀಡುತ್ತಾರೆ. ಅವರ ಶ್ರಮಕ್ಕೆ, ಸೇವೆಗೆ ಮನ್ನಣೆ ನೀಡಬೇಕು. ಆದ್ದರಿಂದ ರೈತರನ್ನು ಗೌರವಿಸುವುದಲ್ಲಿ ವಿಶೇಷ ಅರ್ಥವಿದೆ ಎಂದು ತಿಳಿಸಿದರು.  ಸಾಧನೆಗೆ ವಯಸ್ಸು, ಬಡತನ, ಕುಟುಂಬದ ಅಸಹಕಾರ, ಹಣದ ಕೊರತೆ ಇದಾವುದೂ ಅಡ್ಡಿಯಲ್ಲ. ಛಲ ಇರಬೇಕು, ಮನಸ್ಸು ದೃಢವಾಗಿರಬೇಕು. ಅಪ್ಪ, ಅಮ್ಮ ಮಕ್ಕಳ ಮೇಲಿಟ್ಟಿರುವ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಂಡು ಬದುಕನ್ನು ರೂಪಿಸಿಕೊಳ್ಳುವ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.  ಹೆಣ್ಣು ಮಕ್ಕಳು ಎಷ್ಟೇ ಸಬಲರಾಗಿದ್ದರೂ ಗಂಡು ಮಕ್ಕಳ ಆಶ್ರಯ ಬೇಕೇಬೇಕು. ನಮಗೇನಾದರೂ ತೊಂದರೆಯಾದರೆ ಅಪ್ಪನಿಗೆ, ಅಣ್ಣನಿಗೆ, ಗಂಡನಿಗೆ ಫೋನ್ ಮಾಡಿ ನಮ್ಮ ನೋವು, ಕಷ್ಟವನ್ನು ತಿಳಿಸುತ್ತೇವೆ. ಹಾಗಂತ ಅದು ನಮ್ಮ ದೌರ್ಬಲ್ಯವಲ್ಲ, ಗಂಡು ಮಕ್ಕಳ ಮೇಲಿಟ್ಟಿರುವ ನಂಬಿಕೆಯಾಗಿದೆ ಎಂದರು.  ಗಂಡು ಮಕ್ಕಳು ಉತ್ತಮವಾಗಿ ಕೆಲಸ ಮಾಡಿ, ಸಂಪಾದಿಸಿ ಕುಟುಂಬವನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕು. ಅದಕ್ಕೆ ಬೇಕಾದ ಸಿದ್ಧತೆಯನ್ನು ಓದಿನಿಂದಲೋ, ಕೌಶಲದಿಂದಲೋ ಮಾಡಿಕೊಳ್ಳಿ. ಮುಂದೆ ಮದುವೆಯಾದಾಗ ಹೆಂಡತಿ ದುಡಿಯದ ಗಂಡನನ್ನು ಒಪ್ಪಿಕೊಳ್ಳುವುದಿಲ್ಲ. ಈಗಿನ ವಾತಾವರಣವೇ ಹಾಗಿದೆ ಎಂದು ಹೇಳಿದರು.  ಗಂಡ ದುಡಿಮೆ ಮಾಡುವಾಗ ಮಹಿಳೆಯರು ಅದನ್ನೇ ನಂಬಿಕೊಂಡು ಇರುವ ಬದಲಾಗಿ, ಅವಕಾಶವಿದ್ದಾಗ ಸ್ವಾವಲಂಬಿಯಾಗಿ ದುಡಿಯುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವೈಯಕ್ತಿಕವಾಗಿ ನೆಲೆ ನಿಲ್ಲುವ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.  ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಗಾಯತ್ರಿ ಮಾತನಾಡಿ, ಹಣಕ್ಕಾಗಿ ಯೂಟ್ಯೂಬ್‌ನಲ್ಲಿ ರೀಲ್ಸ್ ಅಥವಾ ಇನ್ನಾವುದೋ ವಿಷಯಗಳನ್ನು ಹಂಚಿಕೊಳ್ಳುವ ಬದಲಾಗಿ ಸಮಾಜಮುಖಿ ಬದುಕನ್ನು ರೂಪಿಸುವ ಸಾಧಕರನ್ನು ಪರಿಚಯಿಸಿ. ಕೃಷಿ ಮತ್ತು ಆರೋಗ್ಯಕ್ಕೆ ಪೂರಕವಾದ ಸಾವಯವ ಉತ್ಪನ್ನಗಳ ಮಾರುಕಟ್ಟೆ ಬಗ್ಗೆ ಮಾಹಿತಿ ನೀಡಿ ಜನರನ್ನು ಜಾಗೃತಗೊಳಿಸಬೇಕು ಎಂದು ಹೇಳಿದರು.  ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ತನ್ನಿಂದ ಸಾಧ್ಯವಿಲ್ಲ ಎಂಬ ಮನಸ್ಥಿತಿ ಬಿಟ್ಟು, ಅವಕಾಶವನ್ನೇ ವೇದಿಕೆಯನ್ನಾಗಿ ಮಾಡಿಕೊಂಡು ಮುನ್ನಡೆದಾಗ ಯಶಸ್ಸಿನ ಹಾದಿ ಕಾಣುತ್ತದೆ ಎಂದು ತಿಳಿಸಿದರು.  ಕುಲಸಚಿವ ಪ್ರೊ.ಆರ್. ಶಶಿಧರ್, ಪ್ರೊ. ಜೆ.ಕೆ. ರಾಜು ಮಾತನಾಡಿದರು. ಕಾರ್ಯಕ್ರಮದ ಸಂಘಟಕಿ ಡಾ.ಆರ್. ಸುನೀತಾ ಸ್ವಾಗತಿಸಿದರು, ಡಾ.ಆಸೀಫ್ ಉಲ್ಲಾ ವಂದಿಸಿದರು.  ...  

(ಕೋಟ್)  

ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ. ಭೂಮಿಯ ರಕ್ಷಣೆಯ ಜತೆಗೆ ಬೆಳೆ ಪದ್ಧತಿ, ಮಾರುಕಟ್ಟೆ, ಉತ್ಪಾದನಾ ಕ್ಷೇತ್ರಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಬೆಳೆ ನಿರ್ವಹಿಸಲು ಆದ್ಯತೆ ನೀಡಬೇಕಾಗಿದೆ. ಕೃಷಿ ರಂಗದಲ್ಲಿ ಮಹಿಳೆಯರಿಗೆ ಅತಿ ಹೆಚ್ಚು ಉದ್ಯೋಗ ಅವಕಾಶಗಳಿದ್ದು, ಸಮರ್ಪಕ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು.   ಸರೋಜ ಎನ್. ಪಾಟೀಲ, ಉದ್ಯಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net