

ಚನ್ನಗಿರಿ : ಪ್ರಸ್ತುತ ಸಮಾಜದಲ್ಲಿ ಮಹಿಳೆ ಪುರುಷರಿಗೆ ಸಮಾನವಾಗಿ ಸವಾಲುಗಳನ್ನು ಎದುರಿಸುವ ಮೂಲಕ ಬಲಿಷ್ಠವಾಗಿ ಬೆಳೆಯುತ್ತಿದ್ದಾಳೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ನಿರ್ದೇಶಕಿ ಎಂ.ಜಿ. ಶಶಿಕಲಾ ಮೂರ್ತಿ ಹೇಳಿದರು. ಪಟ್ಟಣದ ಶ್ರೀ ಮೌದ್ಗಲ್ ಅಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಹಿಳಾ ಜ್ಞಾನ ವಿಕಾಸ ಯೋಜನೆಯಡಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಗಿ ಮಾತನಾಡಿದರು. ಮಹಿಳೆ ರಾಜಕೀಯ, ಅರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾಗಲು ಶಿಕ್ಷಣ ಅತ್ಯಗತ್ಯ. ಅದಿಲ್ಲದೆ ಸಬಲೀಕರಣ ಸಾಧ್ಯವಿಲ್ಲ. ಜ್ಞಾನ ಪಡೆದುಕೊಳ್ಳುವ ಹುಮ್ಮಸ್ಸು ನಮ್ಮಲ್ಲಿರಬೇಕು. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಸರಿಯಾದ ಸಂಸ್ಕಾರ ತಾಯಂದಿರು ನೀಡಿದಲ್ಲಿ ವೃದ್ಧಾಶ್ರಮಗಳು ಕಡಿಮೆಯಾಗಲಿವೆ ಎಂದರು. ನಾಲ್ಕು ಗೋಡೆಗಳ ನಡುವೆ ಇದ್ದ ಮಹಿಳೆ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಸೇರಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾಳೆ ಎಂದರು. ಸಾಕ್ಷರತೆ, ಅತ್ಮವಿಶ್ವಾಸ ಹಾಗೂ ಕೌಶಲಗಳ ಸಹಾಯದಿಂದ ಮಹಿಳೆಯರ ಸಬಲೀಕರಣ ಸಾಧ್ಯ. ಪಾಲಕರು ಭೇದ ಮಾಡದೆ ಹೆಣ್ಣು ಮಕ್ಕಳಿಗೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತಿಳಿಸಿದರು. ಮನೆಯಲ್ಲಿ ಶಿಕ್ಷಣ ಪಡೆದ ಮಹಿಳೆ ಇದ್ದರೆ ಆ ಮನೆಯ ಮುಂದಿನ ಪೀಳಿಗೆ ಶಿಕ್ಷಣ, ಸಂಸ್ಕಾರವನ್ನು ಸುಲಭವಾಗಿ ಪಡೆಯುತ್ತಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಎಂ.ಬಿ. ರಾಜಪ್ಪ ಮಾತನಾಡಿ, ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ಶೇ. 33ರಷ್ಟು ಮೀಸಲಾತಿ ನೀಡಿದ್ದು, ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು. ಚಿತ್ರದುರ್ಗ ಪ್ರಾದೇಶಿಕ ವ್ಯಾಪ್ತಿಯ ಜ್ಞಾನವಿಕಾಸ ಯೋಜನೆ ಯೋಜನಾಧಿಕಾರಿ ರತ್ನ ಮೈತಾಳೆ, ಯೋಜನಾಧಿಕಾರಿ ಎ.ವಿ. ಅಜಿತ್‌ಕುಮಾರ್, ಜ್ಞಾನ ವಿಕಾಸ ಸಮನ್ವಾಧಿಕಾರಿ ಯಮುನಾ, ಶಿಲ್ಪ ಇದ್ದರು.