ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ನಿರ್ಣಾಯಕ

dvg-Women-09.jpg
Published on

ದಾವಣಗೆರೆ : ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ ಎಂದು ಗಾಯತ್ರಿ ಜಿ.ಎಂ. ಸಿದ್ದೇಶ್ವರ ಹೇಳಿದರು.
 ನಗರದ ಮಾರ್ಕಂಡೇಶ್ವರ ಸಮುದಾಯ ಭವನದಲ್ಲಿ ಸೋಮವಾರ, ದಾವಣಗೆರೆ ಮಾರ್ಕಂಡೇಶ್ವರ ಸಮಾಜದ ಅಶಕ್ತ ಮಹಿಳೆಯರಿಗೆ ಸಂಸದ ಜಿ.ಎಂ. ಸಿದ್ದೇಶ್ವರ ವೈಯಕ್ತಿವಾಗಿ ನೀಡಿದ 10 ಹೊಲಿಗೆ ಯಂತ್ರಗಳನ್ನು ಮಹಿಳೆಯರಿಗೆ ವಿತರಿಸಿ ಮಾತನಾಡಿ, ಮಹಿಳೆಯರು ಹಿಂಜರಿಕೆ ಇಲ್ಲದೇ ಎಲ್ಲ ಕ್ಷೇತ್ರಗಳಲ್ಲಿ ದಾಪುಗಾಲು ಇಡಬೇಕಾಗಿದೆ ಎಂದು ತಿಳಿಸಿದರು.
 ಮಹಿಳೆಯರ ಸಬಲೀಕರಣ ಇಂದಿನ ಪ್ರಥಮ ಆದ್ಯತೆಯಾಗಬೇಕು. ತೊಟ್ಟಿಲು ತೂಗುವ ಕೈ ದೇಶವನ್ನು ಸಹ ಮುನ್ನಡೆಸಬಲ್ಲದು ಎನ್ನುವುದನ್ನು ಈಗಾಗಲೇ ಅನೇಕ ಸಂದರ್ಭಗಳಲ್ಲಿ ಸಾಬೀತು ಮಾಡಲಾಗಿದೆ ಎಂದು ಹೇಳಿದರು.
 2009 ರಲ್ಲಿ ಭಾರತ ಪ್ರಥಮ ಮಹಿಳಾ ರಾಷ್ಟ್ರಪತಿಯನ್ನು ಹೊಂದಿತ್ತು. ಪ್ರಸ್ತುತ ದ್ರೌಪದಿ ಮುರ್ಮು ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಇದು ಮಹಿಳೆಯರಾದ ನಮಗೆಲ್ಲರಿಗೂ ಗೌರವ ತರುವ ಸಂಗತಿಯಾಗಿದೆ ಎಂದರು.
 ಮಹಿಳೆಯರು ಹಣ ಉಳಿತಾಯ ಮಾಡುವ ಕಲೆಯನ್ನು ಚೆನ್ನಾಗಿ ಕಲಿತುಕೊಳ್ಳಬೇಕು. ಕಷ್ಟ ಕಾಲದಲ್ಲಿ ಆ ಹಣ ನೆರವಿಗೆ ಬರುತ್ತದೆ. ರಾಜ್ಯದಲ್ಲಿ ಧರ್ಮಸ್ಥಳದ ಮಂಜುನಾಥೇಶ್ವರ ಸಂಘದವರು ಮಹಿಳೆಯ ಸಬಲೀಕರಣಕ್ಕಾಗಿ ನೆರವು ನೀಡುತ್ತಾ ಬಂದಿದ್ದಾರೆ. ಅದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು. ಸದುದ್ದೇಶದ ಇಂತಹ ಯೋಜನೆಗಳನ್ನು ಯಾರೂ ದುರುಪಯೋಗ ಮಾಡಿಕೊಳ್ಳಬಾರದು. ಯಾರೋ ಕೆಲವರು ಮಾಡುವ ತಪ್ಪಿನಿಂದಾಗಿ ನಿಜವಾಗಿಯೂ ಅವಶ್ಯಕತೆ ಇರುವವರಿಗೆ ಅನ್ಯಾಯವಾಗುತ್ತದೆ ಎಂದು ಹೇಳಿದರು.
 ದೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಪ್ರೇಮಾ ನಟರಾಜ್, ಗಾಯತ್ರಿ ಸುಭಾಷ್‌ಚಂದ್ರ, ಮಾರ್ಕಂಡೇಶ್ವರ ಸಮಾಜದ ನಾಗಪ್ಪ, ಮುಖಂಡರಾದ ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ಭಾಗ್ಯಾ ಪಿಸಾಳೆ, ಬಾಲು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net