ಅಹಲ್ಯಾಬಾಯಿ ಆಡಳಿತ ವೈಖರಿ ಮಾದರಿ

dvg-bjp_20250527134002127.jpg
Published on

ದಾವಣಗೆರೆ : ಮಹಾರಾಷ್ಟ್ರದ ಅಹಲ್ಯಾಬಾಯಿ ಹೋಳ್ಕರ್ ಅವರ ಆಡಳಿತ ವೈಖರಿ ಇಂದಿಗೂ ಮಾದರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಹೇಳಿದರು.  ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ, ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ಸುಮಾರು 28 ವರ್ಷ ಕಾಲ ನ್ಯಾಯ, ನೀತಿಯಿಂದ ರಾಜ್ಯಭಾರ ಮಾಡಿದ ಅಹಲ್ಯಾಬಾಯಿ ಅವರಿಗೆ ಪ್ರಜೆಗಳ ಹಿತವೇ ಮುಖ್ಯವಾಗಿತ್ತು. ಅವರು ಮಹಿಳಾ ಸಬಲೀಕರಣಕ್ಕೆ ಪ್ರಯತ್ನಿಸಿದರು. ಬಾಲ್ಯ ವಿವಾಹ, ಸತಿ ಪದ್ಧತಿಯಂಥ ಅನಿಷ್ಟಗಳ ನಿರ್ಮೂಲನೆಗೆ ಪಣ ತೊಟ್ಟಿದ್ದರು ಎಂದು ತಿಳಿಸಿದರು.  ದೇಶದಲ್ಲಿ ಕಿತ್ತೂರು ಚನ್ನಮ್ಮ, ರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರಂಥ ಅನೇಕ ಮಹಿಳೆಯರು ಆಳ್ವಿಕೆ ನಡೆಸಿದ್ದಾರೆ. ಒಬ್ಬೊಬ್ಬರದೂ ಒಂದೊಂದು ವೈಶಿಷ್ಟೃವಿದೆ. ಅಹಲ್ಯಾಬಾಯಿ ಹೋಳ್ಕರ್ ಅವರದು ವಿಶೇಷ ವ್ಯಕ್ತಿತ್ವ ಎಂದು ಬಣ್ಣಿಸಿದರು.  ಕೇವಲ 8ನೇ ವಯಸ್ಸಿಗೆ ಮದುವೆಯಾದ ಅಹಲ್ಯಾಬಾಯಿ ಅವರಿಗೆ ಆ ಚಿಕ್ಕ ವಯಸ್ಸಿನಲ್ಲೇ ಅಸಾಧಾರಣ ಬುದ್ಧಿಶಕ್ತಿ, ಧೈರ್ಯವಿತ್ತು. ಎಲ್ಲರನ್ನೂ ಸಮಾನವಾಗಿ ಕಾಣುವುದು, ರೈತಪರ ಕಾಳಜಿ ಆಗಿನಿಂದಲೇ ಅವರಲ್ಲಿತ್ತು. ಲೆಕ್ಕಪತ್ರ ನಿರ್ವಹಣೆಯಲ್ಲಿ ಅಚ್ಚುಕಟ್ಟುತನ ತೋರಿದ್ದ ಅವರು ತೆರಿಗೆ ಸರಳೀಕರಣವಾಗಬೇಕು ಎಂಬುದನ್ನು ಪ್ರತಿಪಾದಿಸಿದರು ಎಂದರು.  ಮಾವ ಮಲ್ಹಾರ್ ರಾವ್ ಅವರ ಪ್ರೋತ್ಸಾಹದಿಂದ ಅಹಲ್ಯಾಬಾಯಿ ಅವರಲ್ಲಿನ ಆಡಳಿತ ಕೌಶಲ ಬೆಳಕಿಗೆ ಬಂದಿತು. ಅವರು ಕೈಗೊಂಡ ಕ್ರಮಗಳಿಂದ ಸಾಮಾಜಿಕ ಸುಧಾರಣೆಗೆ ದಾರಿಯಾಯಿತು. ಅವರು ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ತಿಳಿಸಿದರು.  ವೈಯಕ್ತಿಕ ಜೀವನದಲ್ಲಿ ಹಲವು ನೋವುಗಳನ್ನು ಎದುರಿಸಿದರೂ ಅವರು ಎದೆಗುಂದಲಿಲ್ಲ. ಬಡವರ ಬಗ್ಗೆ ಅವರಿಗೆ ಕಾಳಜಿ ಇತ್ತು. ಪರೋಪಕಾರ ಮತ್ತು ದಾನ ಮಾಡುವ ಗುಣಗಳು ಅವರಲ್ಲಿದ್ದವು ಎಂದು ಹೇಳಿದರು.  ಬಾಲ ವಿಧವೆಯರ ಸಂಕಷ್ಟಗಳಿಗೆ ಸ್ಪಂದಿಸಿದ ಅಹಲ್ಯಾಬಾಯಿ ಅವರು ವಿಧವೆಯರು ಮರು ಮದುವೆಯಾಗಬೇಕು ಎಂದು ಪ್ರತಿಪಾದಿಸಿದರು. ಅವರಿಗೆ ಶಿಕ್ಷಣ ದೊರೆಯುವಂತೆ ಮಾಡಿದರು. ಯುದ್ಧ ನೀತಿಗಳನ್ನು ಹೇಳಿಕೊಟ್ಟರು ಎಂದು ತಿಳಿಸಿದರು.  ತಮ್ಮ ರಾಜ್ಯದಲ್ಲಿದ್ದ ಶೂರರನ್ನು ಗುರುತಿಸಿ ಸೈನ್ಯಕ್ಕೆ ಸೇರಿಸುವ ಮೂಲಕ ತಮ್ಮ ಸೈನ್ಯವನ್ನು ಬಲಪಡಿಸಿದರು. ದುಡಿದು ತಿನ್ನಲು ಯಾವುದೇ ಆಸರೆ ಇಲ್ಲದವರಿಗೆ ಭೂಮಿಯನ್ನು ಒದಗಿಸಿ ಅವರ ಬದುಕಿಗೆ ದಾರಿ ಮಾಡಿಕೊಟ್ಟರು ಎಂದರು.  ಮಹಿಳಾ ಸಬಲೀಕರಣಕ್ಕೆ ಅವರು ವಿಶೇಷ ಒತ್ತು ಕೊಟ್ಟರು. ಅವರು ಸಮಾಜದಲ್ಲಿ ಬೆಳವಣಿಗೆ ಹೊಂದಲು ಪೂರಕ ಕ್ರಮಗಳನ್ನು ಕೈಗೊಂಡರು. ಬಾಲ್ಯವಿವಾಹ, ಸತಿ ಪದ್ಧತಿಯಂಥ ಅನಿಷ್ಟಗಳನ್ನು ತೊಡೆದು ಹಾಕಲು ಪ್ರಯತ್ನಿಸಿದರು. ವಿಧವೆಯರಿಗೆ ಗಂಡನ ಆಸ್ತಿಯನ್ನು ಅನುಭವಿಸುವ ಸ್ವಾತಂತ್ರೃ ಇರಬೇಕು ಎಂಬ ಕಾನೂನು ಜಾರಿಗೆ ತಂದರು. ಅಂದಿನ ಕಾಲದಲ್ಲಿ ಅದು ಮಹತ್ವದ ಕ್ರಮವಾಗಿತ್ತು ಎಂದು ವಿಶ್ಲೇಷಿಸಿದರು.  ಅಹಲ್ಯಾಬಾಯಿ ಹೋಳ್ಕರ್ ಮತ್ತು ಪ್ರಸ್ತುತ ನಮ್ಮ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರ ಆಡಳಿತ ವೈಖರಿಯಲ್ಲಿ ಸಾಮ್ಯಗಳಿವೆ. ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಅಭಿಪ್ರಾಯಪಟ್ಟರು.  ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪುಷ್ಪಾ ವಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಜಯಮ್ಮ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಕುಮಾರ್ ನಾಯಕ್, ಅಣ್ಣೇಶ್, ಮುಖಂಡರಾದ ಭಾಗ್ಯಾ ಪಿಸಾಳೆ, ರೇಣುಕಾ ಇದ್ದರು. ಗೌರಮ್ಮ ಪಾಟೀಲ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net