

ದಾವಣಗೆರೆ : ಸಾಮಾಜಿಕ ಬಾಂಧವ್ಯ ಗಟ್ಟಿಯಾಗಿರುವುದಕ್ಕೆ ಸ್ತ್ರೀಶಕ್ತಿಯೇ ಕಾರಣ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು. ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ, ರೋಟರಿ ಕ್ಲಬ್ ದಾವಣಗೆರೆ ಹಾಗೂ ನಮನ ಅಕಾಡೆಮಿ ಸಹಯೋಗದಲ್ಲಿ ಅಂತಾ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಮೆಹಂದಿ ಹಾಗೂ ಭಾರತದ ಸಾಂಪ್ರದಾಯಿಕ ವೇಷಭೂಷಣ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಹಾಗೂ ಕವಿ ಬಿ.ಆರ್. ಲಕ್ಷ್ಮಣರಾವ್ ಅವರು ಸ್ತ್ರೀಯನ್ನು ಕುರಿತು ರಚಿಸಿರುವ ಗೀತೆಗಳನ್ನು ಉಲ್ಲೇಖಿಸಿದ ಅವರು, ಡಾ.ಸಿ. ಅಶ್ವತ್ಥ್ ಅವರ ಕಂಠಸಿರಿಯಲ್ಲಿ ಆ ಹಾಡುಗಳು ಮಧುರವಾಗಿ ಮೂಡಿಬಂದಿರುವುದನ್ನು ಮೆಲುಕು ಹಾಕಿದರು. ‘ಹಾಲುಂಡ ತವರು’ ಚಿತ್ರದಲ್ಲಿ ಹೆಣ್ಣಿನ ಭಾವನೆಗಳು ವ್ಯಕ್ತವಾಗಿರುವುದನ್ನು ನೆನಪು ಮಾಡಿಕೊಟ್ಟರು. ಆ ಮೂಲಕ ಮಹಿಳೆಯರ ಮಹತ್ವವನ್ನು ವಿವರಿಸಿದರು. ಸಮಾಜದಲ್ಲಿ ಶೇ. 50 ರಷ್ಟು ಮಹಿಳೆಯರಿದ್ದಾರೆ. ಆದರೆ ಈಗಲೂ ಅವರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಾದ ಸ್ಥಿತಿ ಇದೆ. ಅವರು ಸುಶಿಕ್ಷಿತರಾಬೇಕು, ಸಂಘಟಿತರಾಗುವ ಮೂಲಕ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ‘ವಿಜಯವಾಣಿ’ ವಿಶ್ವಾಸಾರ್ಹ ಹಾಗೂ ಜನಪ್ರಿಯ ಪತ್ರಿಕೆಯಾಗಿದೆ. ಇಂಥ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಹಿಳೆಯರ ಸುಪ್ತ ಪ್ರತಿಭೆಯನ್ನು ಬೆಳಕಿಗೆ ತರುವ ಉತ್ತಮ ಪ್ರಯತ್ನ ಮಾಡಿದೆ. ಮಹಿಳೆಯರಲ್ಲಿ ಪ್ರತಿಭೆ ಇರುತ್ತದೆ. ಇಂಥ ಕಾರ್ಯಕ್ರಮಗಳಲ್ಲಿ ಅದು ಅಭಿವ್ಯಕ್ತಗೊಳ್ಳುವುದರಿಂದ ಇದೊಂದು ಒಳ್ಳೆಯ ಅವಕಾಶ ಎಂದು ಹೇಳಿದರು. ರೋಟರಿ ಕ್ಲಬ್ ದಾವಣಗೆರೆ ಅಧ್ಯಕ್ಷೆ ಸುನೀತಾ ಮೃತ್ಯುಂಜಯ ಮಾತನಾಡಿ, ವಿಜಯವಾಣಿ ಪತ್ರಿಕೆಯೊಂದಿಗೆ ಕೈಜೋಡಿಸಿ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ ಎಂದರು. ವಿಜಯವಾಣಿ ಚಿತ್ರದುರ್ಗ ಆವೃತ್ತಿಯ ಸ್ಥಾನಿಕ ಸಂಪಾದಕ ಎಂ.ಬಿ. ನವೀನ್ ಪ್ರಾಸ್ತಾವಿಕ ಮಾತನಾಡಿದರು. ನಮನ ಅಕಾಡೆಮಿ ಕಾರ್ಯದರ್ಶಿ ಮಾಧವಿ ಗೋಪಾಲಕೃಷ್ಣ ಇದ್ದರು. ವಿಜಯವಾಣಿ ಚಿತ್ರದುರ್ಗ ಆವೃತ್ತಿಯ ಜಾಹೀರಾತು ವ್ಯವಸ್ಥಾಪಕ ಎಂ.ಎಸ್. ಕುಮಾರಸ್ವಾಮಿ, ಜಾಹೀರಾತು ವಿಭಾಗದ ಸೀನಿಯರ್ ಆಫೀಸರ್ ಸಿ.ಬಿ. ಶಶಿಧರ ಮೂರ್ತಿ, ಮುಖ್ಯ ಉಪ ಸಂಪಾದಕ ಹರ್ಷ ಪುರೋಹಿತ್ ಸೇರಿ ವಿಜಯವಾಣಿ ಬಳಗದ ಸಿಬ್ಬಂದಿ ಪಾಲ್ಗೊಂಡಿದ್ದರು. ವಿಶೇಷ ವರದಿಗಾರ ರಮೇಶ ಜಹಗೀರದಾರ್ ಸ್ವಾಗತಿಸಿದರು. ಹಿರಿಯ ವರದಿಗಾರ ಡಿ.ಎಂ. ಮಹೇಶ್ ವಂದಿಸಿದರು. ಗಾಯಕಿ ಮಾನಸಾ ಕಾರ್ಯಕ್ರಮ ನಿರೂಪಿಸಿದರು.