

ದಾವಣಗೆರೆ : ಮಹಿಳೆಯರು ಪರಿವರ್ತನೆಯ ಹರಿಕಾರರಾಗಬೇಕು. ಮಹಿಳೆಯರಿಂದ ಸಮಾಜ ಹಾಗೂ ದೇಶದ ಬದಲಾವಣೆ ಸಾಧ್ಯ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ವನಿತಾ ಸಮಾಜ, ವನಿತಾ ವೈದ್ಯೆಯರ ವೇದಿಕೆ ಹಾಗೂ ವಿಹಾ ವನಿತಾ ಪರಿಸರ ವೇದಿಕೆ ಸಹಯೋಗದಲ್ಲಿ ನಗರದ ಎಂಸಿಸಿ ‘ಎ’ ಬ್ಲಾಕ್‌ನ ವಿಮೋಚನಾ ಸಂಸ್ಥೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೈದ್ಯರು ಮತ್ತು ಪರಿಸರ ದಿನಾಚರಣೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ, ಮಾತನಾಡಿದರು. ಮಹಿಳೆಯರು ಕುಟುಂಬದ ಆಧಾರ ಸ್ತಂಭವಾಗಿದ್ದು, ಮಹಿಳೆಯರಿಂದಲೇ ಬದಲಾವಣೆ ಶುರುವಾಗಬೇಕು. ಇದರಿಂದ ಒಂದು ಕುಟುಂಬದ ಜತೆಗೆ ಸಮಾಜ ಹಾಗೂ ರಾಷ್ಟ್ರದ ಪ್ರಗತಿ ಸಾಧ್ಯವಾಗಲಿದೆ ಎಂದು ತಿಳಿಸಿದರು. ಪ್ರಸಕ್ತ ದಿನಗಳಲ್ಲಿ ಸಮಾಜದಲ್ಲಿ ಸಂಸ್ಕೃತಿ ಹಾಗೂ ಮೌಲ್ಯಗಳು ಕಣ್ಮರೆಯಾಗುತ್ತಿದ್ದು, ಮಹಿಳೆಯರು ತಮ್ಮ ಕುಟುಂಬಕ್ಕಾಗಿ ಸಮಯ ಮೀಸಲಿಡಬೇಕು. ಮಕ್ಕಳಿಗೆ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳ ಬಗ್ಗೆ ತಿಳಿಸಬೇಕು. ಇದರಿಂದ ಬಾಂಧವ್ಯ ಗಟ್ಟಿಯಾಗುತ್ತದೆ ಎಂದರು. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕುಟುಂಬ ನಿರ್ವಹಣೆ ಜತೆಗೆ ಕೆಲಸಗಳ ಒತ್ತಡದಿಂದ ತಮ್ಮ ಆರೋಗ್ಯ ನಿರ್ಲಕ್ಷಿಸುತ್ತಿದ್ದಾರೆ. ಇದು ಸರಿಯಲ್ಲ. ಮಹಿಳೆಯರು ತಮ್ಮ ಆರೋಗ್ಯ ಕಾಪಾಡಿಕೊಂಡಾಗ ಕುಟುಂಬ ಮತ್ತು ಸಮಾಜಕ್ಕೆ ಹೆಚ್ಚಿನ ಸೇವೆ ಸಲ್ಲಿಸಬಹುದಾಗಿದೆ ಎಂದು ಹೇಳಿದರು. ಎಸ್.ಎಸ್. ಹೆಲ್ತ್‌ಕೇರ್ ಟ್ರಸ್ಟ್ ಮಹಿಳೆಯರು ಮತ್ತು ಮಕ್ಕ:ಳ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದೆ. ನಗರ ಹಾಗೂ ಗ್ರಾಮೀಣ ಭಾಗಕ್ಕೆ ಮೀಸಲಿದ್ದ ಆರೋಗ್ಯ ಸೇವೆಯನ್ನು ಜಿಲ್ಲೆಗೆ ವಿಸ್ತರಿಸಿದ್ದು, ಎಲ್ಲ ತಾಲೂಕುಗಳಲ್ಲೂ ಆರೋಗ್ಯ ಶಿಬಿರಗಳ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು. ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ಅವರು ವನಿತಾ ಸಮಾಜವನ್ನು ಒಂದು ವಿಜನ್ ಇಟ್ಟುಕೊಂಡು ಬೆಳೆಸುವ ಜತೆಗೆ ಅನೇಕ ಮಹಿಳೆಯರನ್ನು ಸಮಾಜ ಸೇವೆಗೆ ಸಿದ್ದಗೊಳಿಸಿದ್ದಾರೆ ಎಂದು ಸ್ಮರಿಸಿದ ಅವರು, ಹಳ್ಳಿಯಲ್ಲಿ ಹುಟ್ಟಿ ಬೆಳೆದ ತಾವು ಎಲ್ಲರ ಅಪೇಕ್ಷೆಯಿಂದ ಸಂಸತ್ ಪ್ರವೇಶಿಸಿದ್ದು, ಮಹಿಳೆಯರ ಧ್ವನಿಯಾಗಿ ಕೆಲಸ ನಿರ್ವಹಿಸುವುದಾಗಿ ಭರವಸೆ ನೀಡಿದರು. ವನಿತಾ ಸಮಾಜದ ಅಧ್ಯಕ್ಷೆ ಪದ್ಮಾ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಐಎಂಎ ಕಾರ್ಯದರ್ಶಿ ಡಾ.ಇ.ಎಂ. ಸುರೇಂದ್ರ ಇದ್ದರು. ವನಿತಾ ಪರಿಸರ ವೇದಿಕೆ ಅಧ್ಯಕ್ಷೆ ಡಾ. ಶಾಂತಾಭಟ್ ಸ್ವಾಗತಿಸಿದರು. ಡಾ.ಚೈತಾಲಿ ಹಾಗೂ ಗೀತಾ ಬದರಿನಾಥ್ ವೇದಿಕೆಗಳ ವರದಿ ಮಂಡಿಸಿದರು. ಲತಿಕಾ ದಿನೇಶ್ ಶೆಟ್ಟಿ ಪರಿಚಯಿಸಿದರು.