

ದಾವಣಗೆರೆ: ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ನಡೆಯುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕೊಳೆಗೇರಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಇಂಥ ಪ್ರಕರಣಗಳು ಕಂಡುಬರುವುದರಿಂದ ಅಂಥ ಕಡೆಗಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅಧಿಕಾರಿಗಳಿಗೆ ಸೂಚಿಸಿದರು.
ಈ ನಿಟ್ಟಿನಲ್ಲಿ ಬಾಲ್ಯ ವಿವಾಹ ನಿಷೇಧ ಯೋಜನೆಯ ತಾಲೂಕು ಮಟ್ಟದ ಸಮನ್ವಯ ಸಮಿತಿಗಳ ಸದಸ್ಯರ ಜತೆಗೆ ವಿಡಿಯೋ ಸಂವಾದ ನಡೆಸಿ, ಸ್ಥಳೀಯವಾಗಿ ಏನೆಲ್ಲ ಜಾಗೃತಿ ಮೂಡಿಸಬೇಕು ಎನ್ನುವ ಕುರಿತು ಚರ್ಚಿಸೋಣ ಎಂದು ತಿಳಿಸಿದರು.
ಬಾಲ್ಯವಿವಾಹ ತಡೆಗಟ್ಟುವ ಕುರಿತು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ ಬಿ. ಇಟ್ನಾಳ್ ಹೇಳಿದರು.
ಇದಕ್ಕೂ ಮೊದಲು ಇಲಾಖೆಯ ಉಪ ನಿರ್ದೇಶಕಿ ವಾಸಂತಿ ಉಪ್ಪಾರ ಮಾತನಾಡಿ, ಈ ವರ್ಷದ ಏಪ್ರಿಲ್‌ನಿಂದ ಜೂನ್ ಅಂತ್ಯದ ವರೆಗೆ ಜಿಲ್ಲೆಯಲ್ಲಿ ಬಾಲ್ಯ ವಿವಾಹದ 23 ಪ್ರಕರಣಗಳು ದಾಖಲಾಗಿವೆ, ಅವುಗಳಲ್ಲಿ 21 ಅನ್ನು ತಡೆಗಟ್ಟಲಾಗಿದ್ದು 2 ಬಾಲ್ಯ ವಿವಾಹಗಳು ನಡೆದಿವೆ ಎಂದು ಮಾಹಿತಿ ನೀಡಿದರು.
ಚೈಲ್ಡ್‌ಲೈನ್ ಸಂಸ್ಥೆಯ ಕೆ.ಎಂ. ಕೊಟ್ರೇಶ್ ಮಾತನಾಡಿ, ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಸಮಿತಿಗಳು ಹೆಚ್ಚು ಕ್ರಿಯಾಶೀಲವಾಗಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.
ಜಾಗೃತ ಮಹಿಳಾ ಸಂಘದ ಕಾರ್ಯದರ್ಶಿ ಅಮೀನಾಬಾನು ತಮ್ಮ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ, ಅಲ್ಲಿಂದ ಬಿಡುಗಡೆ ಹೊಂದಿದವರಲ್ಲಿ ಕೆಲವರು ಗಾರ್ಮೆಂಟ್ ಕಾರ್ಖಾನೆಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ನರ್ಸಿಂಗ್ ವೃತ್ತಿಯಲ್ಲಿ ಕೆಲವರು ತೊಡಗಿದ್ದಾರೆ, ಬೇಕರಿ ಇನ್ನಿತರ ಕಡೆಗಳಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ ಎಂದು ವಿವರಿಸಿದರು.
ಒಟ್ಟು 1728 ಅಂಗನವಾಡಿ ಕೇಂದ್ರಗಳಿವೆ. 805 ರಲ್ಲಿ ಕೈತೋಟಗಳಿವೆ, 1719 ಅಂಗನವಾಡಿಗಳು ಅಕ್ಷಯಪಾತ್ರೆ ಹೊಂದಿವೆ ಎಂದು ವಾಸಂತಿ ಉಪ್ಪಾರ ಮಾಹಿತಿ ನೀಡಿದರು. ಅಪೌಷ್ಟಿಕ ಮಕ್ಕಳು ಪ್ರಾಥಮಿಕ ಶಾಲೆಗಳಿಗೆ ಪ್ರವೇಶ ಪಡೆದ ನಂತರ ಅವರ ಆರೋಗ್ಯದ ಬಗ್ಗೆ ಶಿಕ್ಷಣ ಇಲಾಖೆ ಗಮನಿಸಿ ಅವರಿಗೆ ಪೌಷ್ಟಿಕ ಆಹಾರ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಡಿಸಿ ಶಿವಾನಂದ ಕಾಪಶಿ ಡಿಡಿಪಿಐಗೆ ಸೂಚಿಸಿದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ ಕೆಲವು ಸಲಹೆಗಳನ್ನು ನೀಡಿದರು. ಜಾಗೃತ ಮಹಿಳಾ ಸಂಘದ ಸತ್ಯಭಾಮಾ ಮಂಜುನಾಥ್ ಇದ್ದರು.
...
(ಬಾಕ್ಸ್)
ಸೂರು ಕಲ್ಪಿಸಲು ಆಗ್ರಹ
ತಮ್ಮ ಸಮುದಾಯದವರಿಗೆ ವಸತಿ ಸೌಲಭ್ಯ ಒದಗಿಸುವಂತೆ ತೃತೀಯ ಲಿಂಗಿಗಳು ಸಭೆಯಲ್ಲಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಒಟ್ಟು 1092 ತೃತೀಯ ಲಿಂಗಿಗಳು ತಮ್ಮ ಸಂಸ್ಥೆಯಲ್ಲಿ ನೋಂದಣಿಯಾಗಿದ್ದಾರೆ. ಸೂರಿಲ್ಲದ ಕಾರಣ ಸಮಸ್ಯೆ ಎದುರಿಸುತ್ತಿದ್ದೇವೆ. ಬಾಡಿಗೆ ಮನೆಗಳೂ ಸಿಗುತ್ತಿಲ್ಲ. ಬ್ಯಾಂಕ್ ಸೌಲಭ್ಯ ಪಡೆಯುವುದೂ ಕಷ್ಟವಾಗಿದೆ ಎಂದು ಅಭಯ ಸ್ಪಂದನ ಸಂಸ್ಥೆಯ ಸದಸ್ಯರು ಅಳಲು ತೋಡಿಕೊಂಡರು.
ದಾವಣಗೆರೆ ಸೇರಿ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳನ್ನು ಒಳಗೊಂಡಂತೆ ಒಟ್ಟು 126 ತೃತೀಯ ಲಿಂಗಿಗಳಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಗೊಂಡಿದ್ದು ಸಮೀಕ್ಷೆ ನಡೆಸಬೇಕಿದೆ ಎಂದು ಅಧಿಕಾರಿ ಮಹಾಂತೇಶ್ ತಿಳಿಸಿದರು.
ಅಗತ್ಯ ಇರುವವರಿಗೆ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ಅಂಗನವಾಡಿ ಕಾರ್ಯಕರ್ತರ ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಗೃಹಲಕ್ಷ್ಮೀ, ಶಕ್ತಿ ಯೋಜನೆಯ ಸೌಲಭ್ಯವೂ ದೊರೆಯುತ್ತದೆ ಎಂದು ಡಿಸಿ ಶಿವಾನಂದ ಕಾಪಶಿ ಹೇಳಿದರು.
ಲೈಂಗಿಕ ಕಾರ್ಯಕರ್ತರು ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಸಭೆಯಲ್ಲಿ ದೂರಿದರು. ಅದಕ್ಕೆ ಉತ್ತರಿಸಿದ ಎಸ್ಪಿ ಡಾ. ಅರುಣ್, ನಿಮ್ಮ ಮನೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಿ. ಅಂಥ ಸಂದರ್ಭ ಬಂದಾಗ ಸಿಸಿ ಟಿವಿ ದೃಶ್ಯಗಳ ಆಧಾರದ ಮೇಲೆ ದೌರ್ಜನ್ಯ ಮಾಡುವವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು.