ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ಕ್ರಮ

dvg-farmers-meeting-23.jpg
Published on

ದಾವಣಗೆರೆ : ಬೇಸಿಗೆ ಹಂಗಾಮಿನಲ್ಲಿ ಬೆಳೆದಿರುವ ತೋಟಗಾರಿಕೆ ಬೆಳೆಗೆ ಮತ್ತು ಕುಡಿಯುವ ನೀರಿಗಾಗಿ ಸರದಿಯಲ್ಲಿ ನೀರನ್ನು ಬಿಡುಗಡೆ ಮಾಡಲಾಗಿದ್ದು, ಕೊನೆಭಾಗದ ರೈತರಿಗೆ ನೀರು ತಲುಪುವಂತೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಭರವಸೆ ನೀಡಿದರು.
 ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ತ್ಯಾವಣಿಗಿ, ಮೆಳ್ಳೆಕಟ್ಟೆ, ಹಿರೇಮಳಲಿ, ವಲಯ 2ರ ರೈತ ಮುಖಂಡರು ಮತ್ತು ರೈತರೊಂದಿಗೆ ಸಭೆ ನಡೆಸಿ, ಮಾತನಾಡಿದರು.
 ಜಲಾಶಯದಲ್ಲಿದ್ದ ನೀರಿನ ಆಧಾರದ ಮೇಲೆ ನೀರು ಹಂಚಿಕೆಯಾಗಿದೆ. ಆದ್ದರಿಂದ ಅಕ್ರಮ ಪಂಪ್‌ಸೆಟ್ ತೆರವುಗೊಳಿಸುವ ಮೂಲಕ ಕೊನೆ ಭಾಗಕ್ಕೆ ನೀರು ತರಬೇಕಿದೆ ಎಂದು ತಿಳಿಸಿದರು.
 ವೇಳಾಪಟ್ಟಿಯಂತೆ ಫೆ.28ರ ವರೆಗೆ ಹರಿಸುವ ನೀರನ್ನು, ಹೆಚ್ಚುವರಿಯಾಗಿ ಇನ್ನೂ ಕೆಲವು ದಿನ ನೀರು ಹರಿಸುವಂತೆ ಸಚಿವರ ಗಮನಕ್ಕೆ ತರಲಾಗುತ್ತದೆ ಜತೆಗೆ ಭದ್ರಾವತಿ ಭಾಗದಲ್ಲಿ ಅಕ್ರಮವಾಗಿರುವ ಕೊಳವೆಬಾವಿ ತೆರವಿಗೂ ಮನವಿ ಮಾಡಲಾಗುತ್ತದೆ ಎಂದರು.
 ಕಾಲುವೆ ಮೇಲ್ಬಾಗದಲ್ಲಿನ ರೈತರಿಗೆ ಸಾಕಷ್ಟು ನೀರು ಲಭ್ಯವಾಗಿ ಕೊನೆ ಭಾಗದ ರೈತರ ಹಿತದೃಷ್ಟಿಯಿಂದ ನೀರನ್ನು ಬಳಕೆ ಮಾಡದಂತೆ ತಿಳಿಸುವುದಾಗಿ ಹೇಳಿದರು.
 ಚನ್ನಗಿರಿ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮವಾಗಿ ಅಳವಡಿಸಿರುವ ಪಂಪ್‌ಸೆಟ್ ತೆರವಿಗಾಗಿ ಈಗಾಗಲೇ ಸೂಚನೆ ನೀಡಲಾಗಿದೆ ಮತ್ತು ವಿದ್ಯುತ್ ಸ್ಥಗಿತಗೊಳಿಸಿದ್ದು ಜತೆಗೆ ಅಲ್ಲಿನ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
 ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಸುರೇಶ್ ಇಟ್ನಾಳ್ ಮಾತನಾಡಿ, ಕಾಲುವೆಯಲ್ಲಿ ಹೂಳೆತ್ತಲು ಖಾತರಿಯಡಿ 4 ಲಕ್ಷ ಮಾನವ ದಿನಗಳ ಸೃಜನೆಗೆ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದರು.
 ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್, ರೈತ ಮುಖಂಡರಾದ ಕೆ.ಎನ್. ಮಂಜುನಾಥ್, ಹನುಮಂತಪ್ಪ, ಕೊಳೇನಹಳ್ಳಿ ಸತೀಶ್, ಧನಂಜಯ ಕಡ್ಲೆಬಾಳು, ಮಲ್ಲೇಶಪ್ಪ ಸೇರಿದಂತೆ ಇತರ ರೈತರು ಸಭೆಯಲ್ಲಿ ಮಾತನಾಡಿದರು.
 ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ. ಸಂತೋಷ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಹರ್ಷ, ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್, ಬೆಸ್ಕಾಂ ಇ.ಇ ಪಾಟೀಲ್ ಮತ್ತು ರೈತರು ಸಭೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net