ಡಿಸೆಂಬರ್ ವೇಳೆಗೆ ಜಲಸಿರಿ ಕಾಮಗಾರಿ ಪೂರ್ಣ

siddesh.jpg
Published on

ದಾವಣಗೆರೆ : ನಗರದ ಜನತೆಗೆ ದಿನದ 24 ಗಂಟೆ ಕುಡಿಯುವ ನೀರು ಪೂರೈಸುವ ಜಲಸಿರಿ ಯೋಜನೆಯ ಕಾಮಗಾರಿಯನ್ನು ಡಿಸೆಂಬರ್ ವೇಳೆಗೆ ಮುಗಿಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ ಅಧಿಕಾರಿಗಳಿಗೆ ಸೂಚನೆ ನೀಡಿದರು.
 ಜಿಲ್ಲಾಡಳಿತ ಭವನದಲ್ಲಿ ಶನಿವಾರ ಜಲಸಿರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
 ಯೋಜನೆಯ ಅನುಷ್ಠಾನ ಹಂತದಲ್ಲಿ 3 ಕಡೆ ಕೆಲಸ ಬಾಕಿ ಇದೆ ಎಂದು ಅಧಿಕಾರಿಗಳು ತಿಳಿಸಿದಾಗ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿಗೇ ಮುಗಿಯಬೇಕಿತ್ತು, 1 ವರ್ಷ 2 ತಿಂಗಳಾದರೂ ಮಾಡಿಲ್ಲ. ಪುರಾಣ ಹೇಳುವುದು ಬಿಟ್ಟು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
 ಜಲಸಿರಿ ಯೋಜನೆಯಡಿ 50 ವಲಯಗಳಿವೆ. 13 ವಷಲಯಗಳಿಗೆ ಈಗಾಗಲೇ ನೀರು ಪೂರೈಕೆ ಮಾಡುತ್ತಿದ್ದೇವೆ. ದಿನಕ್ಕೆ 3-4 ಗಂಟೆ ಒದಗಿಸುತ್ತಿದ್ದೇವೆ. 11 ವಲಯಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ (ಟ್ರಯಲ್ ರನ್). ಡಿಸೆಂಬರ್ ವೇಳೆಗೆ ಬಾಕಿ ಕಾಮಗಾರಿಗಳನ್ನು ಪೂರೈಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
 ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಯೋಜನೆಯಡಿ 45 ಕಿ.ಮೀ. ಪೈಪ್‌ಲೈನ್ ಕಾಮಗಾರಿ ಬಾಕಿಯಿದೆ. 97 ಸಾವಿರ ಸಂಪರ್ಕ ಕಲ್ಪಿಸಲಾಗಿದ್ದು 11 ಸಾವಿರ ಸಂಪರ್ಕ ನೀಡುವುದು ಬಾಕಿ ಇದೆ ಎಂದು ಮಾಹಿತಿ ನೀಡಿದರು.
 ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಅಗೆದ ರಸ್ತೆಗಳನ್ನು ಮೊದಲಿದ್ದ ಸ್ಥಿತಿಗೆ ತರಬೇಕು. ಒಂದು ತಿಂಗಳೊಳಗೆ ಈ ಕೆಲಸ ಮುಗಿಯಬೇಕು ಎಂದು ಸಿದ್ದೇಶ್ವರ ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net