ಭದ್ರಾ ನೀರಾವರಿ ಸಲಹಾ ಸಮಿತಿ ಆದೇಶ ಪಾಲಿಸಿ

Siddeshwar-GM_20230922010502795.jpg
Published on

ದಾವಣಗೆರೆ : ಭದ್ರಾ ನಾಲೆಗೆ ನೀರು ಹರಿಸುವ ಸಂಬಂಧ ಈ ಹಿಂದೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿ ಹೊರಡಿಸಿದ ಆದೇಶವನ್ನು ಯಥಾವತ್ತಾಗಿ ಪಾಲಿಸಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ.
 ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭದ್ರಾ ನಾಲೆಗಳಲ್ಲಿ ಸತತ 100 ದಿನಗಳ ಕಾಲ ನೀರು ಹರಿಸುವ ತೀರ್ಮಾನವನ್ನು ಸಲಹಾ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಆದರೆ ಈಗ 40 ದಿನಗಳ ಕಾಲ ನೀರು ಹರಿಸಿ ನಿಲುಗಡೆ ಮಾಡಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.
 ನಾಲೆಗಳಲ್ಲಿ ನೀರು ಹರಿಸಲು ತೀರ್ಮಾನ ಕೈಗೊಳ್ಳುವ ಮುನ್ನವೇ ಯೋಚನೆ ಮಾಡಬೇಕಾಗಿತ್ತು. ಈಗ ರೈತರೆಲ್ಲ ಭತ್ತ ನಾಟಿ ಮಾಡಿ ಗೊಬ್ಬರ ಇತ್ಯಾದಿಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. 50 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಭತ್ತದ ನಾಟಿ ಮಾಡಲಾಗಿದೆ. ಇದಕ್ಕೆಲ್ಲ ರೈತರು ಖರ್ಚು ಮಾಡಿರುವ ಹಣ ಕಲ್ಪನೆ ಮಾಡಲೂ ಅಸಾಧ್ಯವಾಗಿದೆ ಎಂದು ಹೇಳಿದ್ದಾರೆ.
 ಇನ್ನೂ ಒಂದೂವರೆ ತಿಂಗಳು ನೀರು ಹರಿಸಿದರೆ ಭತ್ತದ ಬೆಳೆ ರೈತರ ಕೈಗೆ ಸಿಗಲಿದೆ. ಇಲ್ಲದಿದ್ದರೆ ರೈತರ ಸ್ಥಿತಿ ಅಯೋಮಯವಾಗಲಿದೆ. ನಾಲೆಯಲ್ಲಿ ನೀರು ನಿಲ್ಲಿಸುವುದೊಂದೇ ಪರಿಹಾರವಲ್ಲ. ಅದರ ಬದಲಾಗಿ ಸರ್ಕಾರ ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಮೋಡ ಬಿತ್ತನೆ ಮಾಡಲಿ. ರೈತರ ಹಿತ ಕಾಯುವ ಕೆಲಸವನ್ನು ಸರ್ಕಾರ ಮಾಡಲಿ ಎಂದು ಸಲಹೆ ನೀಡಿದ್ದಾರೆ.
 ಕೃಷಿಯ ಬಗ್ಗೆ ಅನುಭವವೇ ಇಲ್ಲದವರು ಅಧಿಕಾರದಲ್ಲಿದ್ದರೆ ಏನಾಗಬಹುದು ಎಂಬುದಕ್ಕೆ ಕಾವೇರಿ ಮತ್ತು ಭದ್ರಾ ಜಲಾಶಯ ನೀರು ನಿರ್ವಹಣೆಯಲ್ಲಿ ತೋರುತ್ತಿರುವ ಎಡಬಿಡಂಗಿ ನಿಲುವುಗಳೇ ಉದಾಹರಣೆಯಾಗಿವೆ ಎಂದಿದ್ದಾರೆ.
 ಯಾವುದೇ ಸಬೂಬು ಹೇಳದೆ ಮೊದಲು ನೀರಾವರಿ ಸಲಹಾ ಸಮಿತಿ ಸಭೆಯ ಆದೇಶದಂತೆ ನಾಲೆಯಲ್ಲಿ ನೀರು ಹರಿಸಿ ರೈತರ ಬಗ್ಗೆ ಕಾಳಜಿ ಮೆರೆಯಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
 ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net