ಅಮೃತ್ 2.0 ಯೋಜನೆಗೆ ಸಿಗಬೇಕಿದೆ ವೇಗ

dvg-honnali.jpg
Published on

ರಮೇಶ ಜಹಗೀರದಾರ್ ದಾವಣಗೆರೆ  : ಪ್ರತಿಯೊಬ್ಬರಿಗೂ ಸಮರ್ಪಕ ಕುಡಿಯುವ ನೀರು ಸಿಗಬೇಕು ಎಂಬ ಆಶಯದ ಕೇಂದ್ರ ಪುರಸ್ಕೃತ ‘ಅಮೃತ್ 2.0’ ಯೋಜನೆಯು, ಜಿಲ್ಲೆಯ 4 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನುಷ್ಠಾನ ಹಂತದ ಅಡಚಣೆಗಳನ್ನು ಸರಿಪಡಿಸಿಕೊಂಡು ವೇಗ ಪಡೆಯಬೇಕಿದೆ.  ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಈ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುತ್ತಿದೆ.  ಹರಿಹರ ತಾಲೂಕು ಮಲೇಬೆನ್ನೂರು ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ನಂತರ ಕೈಗೊಳ್ಳುತ್ತಿರುವ ಮೊದಲ ಕುಡಿಯುವ ನೀರಿನ ಯೋಜನೆ ಇದಾಗಿದೆ. ಹೊನ್ನಾಳಿ, ಜಗಳೂರು ಮತ್ತು ಚನ್ನಗಿರಿ ಪಟ್ಟಣಗಳಲ್ಲಿ ಈಗಾಗಲೇ ಇರುವ ವ್ಯವಸ್ಥೆಯನ್ನು ಬಲಗೊಳಿಸಲು ಅಮೃತ್ 2.0 ಸಹಾಯಕವಾಗಿದೆ. 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.  ಚನ್ನಗಿರಿಯಲ್ಲಿ 10.74 ಕೊಟಿ ರೂ.ಗಳ ಯೋಜನೆಗೆ ಅನುಮೋದನೆ ದೊರೆತಿದೆ. ಅದರ ವಿನ್ಯಾಸ ಹಾಗೂ ನಕ್ಷೆಗಳಿಗೆ ಒಪ್ಪಿಗೆ ಸಿಗಬೇಕಿದೆ. ಜಗಳೂರು ಪಟ್ಟಣದಲ್ಲಿ 14.58 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಕಳೆದ ಜೂನ್‌ನಲ್ಲಿ ಕಾಮಗಾರಿ ಆರಂಭವಾಗಿದ್ದು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕಿದೆ.  ಹೊಸದಾಗಿ ಚಳ್ಳಕೆರೆ ಮಟ್ಟಿಯಲ್ಲಿ 10 ಲಕ್ಷ ಲೀಟರ್, ಅಶ್ವಿನಿ ಲೇಔಟ್‌ನಲ್ಲಿ 5 ಲಕ್ಷ ಲೀಟರ್ ಸಾಮರ್ಥ್ಯದ ಎತ್ತರ ಮಟ್ಟದ ಜಲ ಸಂಗ್ರಹಾಗಾರ ನಿರ್ಮಿಸಲಾಗುವುದು. 33.42 ಕಿ.ಮೀ. ಉದ್ದದ ಕೊಳವೆ ಮಾರ್ಗ ಅಳವಡಿಸಲಾಗುವುದು. 1694 ಗೃಹ ಸಂಪರ್ಕಗಳನ್ನು ಅಳವಡಿಸಲಾಗುವುದು.  ‘ತಲಾ 135 ಲೀಟರ್‌ನಂತೆ ಪ್ರತಿಯೊಬ್ಬರಿಗೂ ಕುಡಿಯುವ ನೀರು ಸಿಗಬೇಕು ಎಂಬುದು ಈ ಯೋಜನೆಯ ಉದ್ದೇಶವಾಗಿದೆ. ಶೇ. 100 ರಷ್ಟು ವಾಟರ್ ಮೀಟರ್‌ಗಳನ್ನು ಅಳವಡಿಸಲಾಗುವುದು. ಇದರಿಂದ ಸ್ಥಳೀಯ ಸಂಸ್ಥೆಗಳ ಆದಾಯ ವೃದ್ಧಿಯಾಗಲಿದೆ’ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಇಇ ಎಂ.ಬಿ. ರವಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net