

ದಾವಣಗೆರೆ : ಮಧ್ಯ ಕರ್ನಾಟಕದ ನಾಲ್ಕೈದು ಜಿಲ್ಲೆಗಳ ರೋಗಿಗಳಿಗೆ ವೈದ್ಯಕೀಯ ಸೇವೆ ನೀಡುತ್ತಿರುವ ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ ಮಂಗಳವಾರ ದಿಢೀರ್ ಭೇಟಿ ನೀಡಿದ್ದ ರಾಜ್ಯ ಮಹಿಳಾ ಅಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅಲ್ಲಿನ ಅವ್ಯವಸ್ಥೆ, ಅನೈರ್ಮಲ್ಯ ಕಂಡು ಹೌಹಾರಿದರು. ನೆಲದಡಿಯ ನೀರಿನ ಟ್ಯಾಂಕ್‌ನಲ್ಲಿ ಹುಳುಗಳು, ಜರಿ, ಹಲ್ಲಿಗಳ ಓಡಾಟ ಕಂಡು ಬೆಚ್ಚಿಬಿದ್ದರು. ಅಡುಗೆ ಮನೆ, ಶೌಚಗೃಹದ ಅನೈರ್ಮಲ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದರು. ಟ್ಯಾಂಕ್‌ನಲ್ಲಿ ಹುಳುಗಳು ಓಡಾಡುವ ನೀರನ್ನು ಆಸ್ಪತ್ರೆಯಲ್ಲಿ ಬಳಸುತ್ತೀರಾ? ರೋಗಿಗಳಿಗೂ ಈ ನೀರನ್ನೇ ಕುಡಿಸುತ್ತೀರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಾಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಇದಕ್ಕೆಲ್ಲಾ ನೀವು ಉತ್ತರ ಕೊಡಬೇಕು ಎಂದು ತಾಕೀತು ಮಾಡಿದರು. ಆಸ್ಪತ್ರೆಯ ಮಹಿಳಾ ರೋಗಿಗಳ ವಾರ್ಡ್‌ಗಳು, ಹೆರಿಗೆ ಆಸ್ಪತ್ರೆಯಲ್ಲಿ ಹೆಚ್ಚು ಪರಿಶೀಲನೆ ನಡೆಸಿದರು. ಚೀಟಿ ಬರೆಯುವ ಸ್ಥಳದಲ್ಲಿ ಕುಳಿತುಕೊಳ್ಳಲು ಆಸನ, ಔಷಧ ವಿತರಣೆ ಮಾಡುವುದನ್ನು ಪರಿಶೀಲಿಸಿ, ರೋಗಿಗಳು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಆಸ್ಪತ್ರೆ ಒಳಗೆ ಎಕ್ಸ್‌ರೇ ಕೋಣೆ, ಶಸ್ತಚಿಕಿತ್ಸಾ ಕೊಠಡಿ, ಒಪಿಡಿ, ಮಹಿಳಾ ರೋಗಿಗಳು ದಾಖಲಾಗಿರುವ ವಾರ್ಡ್‌ಗಳಿಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿದರು.