

ದಾವಣಗೆರೆ: ಭದ್ರಾ ಜಲಾಶಯದಿಂದ ತಕ್ಷಣ ನಾಲೆಗಳಿಗೆ ನೀರು ಹರಿಸಬೇಕು ಎಂದು ಜಿಲ್ಲಾ ಬಿಜೆಪಿ ವಕ್ತಾರ ಕೊಳೇನಹಳ್ಳಿ ಬಿ.ಎಂ. ಸತೀಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಆಗಸ್ಟ್ 5 ಅಥವಾ 6ರಂದು ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಕರೆದು ನಾಲೆಗೆ ನೀರು ಹರಿಸುವ ಬಗ್ಗೆ ತೀರ್ಮಾನಿಸಬೇಕೆಂದು ನೀರಾವರಿ ನಿಗಮದ ಸಭೆಯಲ್ಲಿ ಅಚ್ಚುಕಟ್ಟು ಪ್ರದೇಶದ ಶಾಸಕರು ಹಾಗೂ ಸಚಿವರು ಚರ್ಚಿಸಿರುವುದು ದುರ್ದೈವ ಸಂಗತಿ ಎಂದಿದ್ದಾರೆ. ಜಿಲ್ಲೆಯ ಜೀವನಾಡಿ ಭದ್ರಾ ಡ್ಯಾಂ ನೀರಿನ ಮಟ್ಟ ದಿನೇದಿನೆ ಹೆಚ್ಚಾಗುತ್ತಿದೆ. ನೀರಿನಮಟ್ಟ ಗುರುವಾರ 171 ಅಡಿ 6 ಇಂಚು ಇದ್ದು, 26044 ಕ್ಯೂಸೆಕ್ ಒಳಹರಿವಿದ್ದು, ಡ್ಯಾಂ ತುಂಬುವುದು ಗ್ಯಾರಂಟಿಯಾಗಿ ರೈತರಲ್ಲಿ ಸಂತಸ ಮನೆ ಮಾಡಿದೆ ಎಂದು ಹೇಳಿದ್ದಾರೆ. ಮೊನ್ನೆ ನಡೆದ ರೈತರ ಸಭೆಯಲ್ಲಿ ಇನ್ನೊಂದೆರಡು ದಿನಗಳಲ್ಲಿ ನಾಲೆಗೆ ನೀರು ಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದರು. ಅದರಂತೆ ನೀರು ಹರಿಸಿದರೆ ಒಣಗಿರುವ ಕೆರೆ ಕಟ್ಟೆಗಳನ್ನು ತುಂಬಿಸಿಕೊಳ್ಳಬಹುದು. ರೈತರು ಭತ್ತದ ಬೀಜ ಚೆಲ್ಲಲು ಅನುಕೂಲವಾಗುತ್ತದೆ ತಿಳಿಸಿದ್ದಾರೆ. ಸಾಮಾನ್ಯವಾಗಿ ಡ್ಯಾಂ ನೀರಿನ ಮಟ್ಟ 186 ಅಡಿ ಪೂರ್ಣ ತುಂಬಲು ಬಿಡುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ನೀರಿನ ಮಟ್ಟ 182-183 ಅಡಿ ತಲುಪಿದ ತಕ್ಷಣ ಹೊಳೆಗೆ ಹರಿಸಲಾಗುತ್ತದೆ. ಇದರಿಂದ ನೀರು ವ್ಯರ್ಥವಾಗಿ ಹರಿದು ಹೋಗಲಿದೆ. ಆದ್ದರಿಂದ ಕೂಡಲೇ ನಾಲೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿದ್ದಾರೆ.