

ದಾವಣಗೆರೆ : ನದಿಗಳ ಆಸುಪಾಸಿನ ಕನಿಷ್ಠ 500 ಮೀಟರ್ ಜಾಗದಲ್ಲಿ ಯಾವುದೇ ಖಾಸಗಿ ಕಾರ್ಯಚಟುವಟಿಕೆಗಳಿಗೆ ಸರ್ಕಾರ ಆಸ್ಪದ ನೀಡಬಾರದು. ಆಗ ಮಾತ್ರ ಜಲಮೂಲ ಸಂರಕ್ಷಣೆ ಸಾಧ್ಯ ಎಂದು ಕೆಎಸ್‌ಪಿಸಿಬಿ ಪ್ರಾದೇಶಿಕ ಅಧಿಕಾರಿ ಡಾ.ಎನ್. ಲಕ್ಷ್ಮೀಕಾಂತ್ ಹೇಳಿದರು.
ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಬುಧವಾರ ಸಿವಿಲ್ ವಿಭಾಗದಿಂದ ಹಮ್ಮಿಕೊಂಡಿದ್ದ ‘ಸುಸ್ಥಿರ ಆಭಿವೃದ್ಧಿಗಾಗಿ ನೀರಿನ ನಿರ್ವಹಣೆ’ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನದಿಯ ತಟದಲ್ಲಿರುವ ಮಣ್ಣು ತುಂಬಾ ಉಪಯುಕ್ತವಾದದ್ದು. ಆದ್ದರಿಂದ ಅದರ ಸದ್ಬಳಕೆ ಮಾಡಿಕೊಳ್ಳುವ ಕಾರ್ಯವಾಗಬೇಕು. ನೀರು ಸಂರಕ್ಷಣೆ ನಮ್ಮೆಲ್ಲರ ಹೊಣೆ. ನೀರಿದ್ದರೆ ಸರ್ವಸ್ವ. ಭೂಮಿಯ ಮೇಲೆ ಶೇ. 75ರಷ್ಟು ನೀರಿದ್ದರೂ ಅದರಲ್ಲಿ ನಮ್ಮ ಬಳಕೆಗೆ ಇರುವುದು ಶೇ.1 ಭಾಗ ಮಾತ್ರ. ನೀರಿನ ಸಂರಕ್ಷಣೆ ಕೇವಲ ಸರ್ಕಾರದ ಗುರಿಯಾಗದೆ ಎಲ್ಲರ ಕರ್ತವ್ಯವಾಗಬೇಕು ಎಂದು ಹೇಳಿದರು.
ಪ್ರತಿಯೊಬ್ಬರೂ ಸಸ್ಯಕಾಶಿ ಅಭಿವೃದ್ಧಿಪಡಿಸಿದರೆ ಸಕಾಲಕ್ಕೆ ಮಳೆ ಬರುತ್ತದೆ. ಇದರಿಂದ ನದಿ, ಹಳ್ಳ, ಕೆರೆ ಅಂತರ್ಜಲ ಹೆಚ್ಚಾಗಿ ನಾಡು ಸಮೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮಣ್ಣಿನ ಸವಕಳಿ ಮರಗಿಡಗಳು ಕುಂಠಿತಕ್ಕೆ ಕಾರಣವಾಗುತ್ತದೆ. ಆದ್ದರಿಂದ ರಸ್ತೆ ಬದಿಯ ಜತೆಗೆ ನದಿ ತಟದಲ್ಲಿ ಹೆಚ್ಚೆಚ್ಚು ಮರಗಿಡ ಬೆಳೆಸಬೇಕು ಎಂದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಡಾ.ಎನ್. ಮಹಾಂತೇಶ ಮಾತನಾಡಿ, ಆಧುನೀಕರಣದ ನೆಪದಲ್ಲಿ ನಿರಂತರವಾಗಿ ಕಾಡು ನಾಶ ಮಾಡುತ್ತಾ, ನೀರಿನ ದುರುಪಯೋಗ ಮಾಡಿಕೊಂಡರೆ ಮುಂದೆ ಜಲಕ್ಷಾಮ ಎದುರಾಗುವುದು ನಿಶ್ಚಿತ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೊಂದು ದಿನ ನೀರಿದ್ದವನೇ ಸಾಹುಕಾರ ಎನ್ನುವ ದುಸ್ಥಿತಿ ಬಂದೊದಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿವರ್ಷ ನಗರದಲ್ಲಿ ನೀರಿನ ನಿರ್ವಹಣೆಗೆ ಸುಮಾರು 26 ಕೋಟಿ ರೂ. ಬಳಸಲಾಗುತ್ತದೆ. 24/7 ನೀರಿನ ಪೂರೈಕೆ, ಪೈಪ್‌ಲೈನ್‌ಗಳಿಗೆ ನೀರಿನ ಸಂಸ್ಕರಣೆಗೆ ಮುಂತಾದವುಗಳಿಗೆ ಇದೇ ವರ್ಷ ಜಲಸಿರಿ ಯೋಜನೆಯು ಕೊನೆಗೊಳ್ಳಲಿದೆ ಎಂದು ಹೇಳಿದರು.
ಪ್ರಾಚಾರ್ಯ ಡಾ.ಪಿ. ನಾಗರಾಜಪ್ಪ, ಡಾ.ಎಂ.ಎಚ್. ದಿವಾಕರ, ಡಾ.ಎಸ್. ಮಂಜಪ್ಪ, ಡಾ. ರೇಷ್ಮಾ ಶೆಟ್ಟಿ ಇತರರು ಇದ್ದರು.