

ದಾವಣಗೆರೆ : ಭದ್ರಾ ಜಲಾಶಯದ ರಕ್ಷಣೆ ಸೇರಿ ಮೂರು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಜುಲೈ 24 ರಂದು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲು ನಗರದಲ್ಲಿ ಭಾನುವಾರ ನಗರದ ಸರ್ಕಿಟ್ ಹೌಸ್‌ನಲ್ಲಿ ಆಯೋಜಿಸಿದ್ದ ಜಿಲ್ಲಾ ರೈತರ ಒಕ್ಕೂಟದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಅಂದು (ಬುಧವಾರ) ಬೆಳಗ್ಗೆ 11 ಗಂಟೆಗೆ ಬಾಡಾ ಕ್ರಾಸ್ ಬಳಿ ಅಚ್ಚುಕಟ್ಟು ಭಾಗದ ರೈತರು ದೊಡ್ಡ ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆಯನ್ನು ಯಶಸ್ವಿಗೊಳಿಸುವ ಮೂಲಕ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಯಿತು. ಜಲಾಶಯದಲ್ಲಿ ನೀರಿನ ಮಟ್ಟ 170 ಅಡಿ ತಲುಪುತ್ತಿದ್ದಂತೆ ಅಥವಾ ಆ. 1ರ ಒಳಗಾಗಿ ನೀರಾವರಿ ಸಲಹಾ ಸಮಿತಿಯ ಸಭೆ ಕರೆದು ನಾಲೆಗೆ ನೀರು ಬಿಡುವ ಕುರಿತು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಭದ್ರಾ ಜಲಾಶಯಕ್ಕೆ ಅಪಾಯ ಬಂದೊದಗಿದೆ. 100 ಅಡಿ ಆಳದಲ್ಲಿ ನೀರು ಸೋರಿಕೆಯಾಗುತ್ತಿದೆ. ಎಮರ್ಜೆನ್ಸಿ ಗೇಟ್‌ಗೆ ಕಾಂಕ್ರಿಟ್ ಹಾಕಿ ದುರಸ್ತಿ ಮಾಡಬೇಕು. ರಿವರ್ ಸ್ಲೀವ್ ಸರಿಪಡಿಸಬೇಕು. ನಾಲೆಗಳ ಹೂಳು ತೆಗೆಯಬೇಕು. ತೂಬುಗಳನ್ನು ಗಟ್ಟಿಗೊಳಿಸಬೇಕು. ಇದಕ್ಕಾಗಿ ಸರ್ಕಾರ 100 ರಿಂದ 150 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಈ ಹಿಂದೆ (2005-06) ಬಿಜೆಪಿ ಆಡಳಿತದಲ್ಲಿ ಭದ್ರಾ ನಾಲೆಗಳ ಆಧುನೀಕರಣಕ್ಕೆ 900 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು. ಅದಾದ ನಂತರ ಇಲ್ಲಿಯ ವರೆಗೆ ಕಾಲುವೆಗಳ ಹೂಳು ತೆಗೆದಿಲ್ಲ, ಅಲ್ಲಿ ಬೆಳೆದಿರುವ ಗಿಡಗಳನ್ನು ತೆಗೆದಿಲ್ಲ ಎಂದು ಹೇಳಿದರು. ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ಕರೆದು ಎಲ್ಲರೂ ಸೇರಿ ಹೋರಾಟ ರೂಪಿಸುವ ಅಗತ್ಯವಿದೆ ಎಂದರು. ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತಂದು ರೈತರ ಹಿತ ಕಾಪಾಡಬೇಕಿದೆ ಎಂದು ತಿಳಿಸಿದರು. ಮಾಜಿ ಶಾಸಕ ಬಸವರಾಜ ನಾಯ್ಕ ಮಾತನಾಡಿ, ಈ ವಿಷಯವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರದ ಗಮನ ಸೆಳೆಯಬೇಕು ಎಂದು ಸಲಹೆ ನೀಡಿದರು. ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ್ ಮಾತನಾಡಿ, ಭದ್ರಾ ಜಲಾಶಯ ಶಿಥಿಲವಾಗುತ್ತಿದೆ. ಸರ್ಕಾರ ಇದರ ಬಗ್ಗೆ ತಾತ್ಸಾರ ಮಾಡಿದೆ. ಇದಕ್ಕಾಗಿ ಹೋರಾಟ ರೂಪಿಸುವ ಅಗತ್ಯವಿದೆ ಎಂದರು. ರೈತ ಒಕ್ಕೂಟದ ಮುಖಂಡ ಬಿ.ಎಂ. ಸತೀಶ್ ಮಾತನಾಡಿ, ಉತ್ತಮ ಮಳೆಯಾಗಿ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು ಬಾಗಿನ ಸಲ್ಲಿಸುವ ದಿನಗಳು ಹತ್ತಿರ ಬರುತ್ತಿವೆ. ಅಧಿಕಾರಿಗಳು ನೀರಿನ ನಿರ್ವಹಣೆಯನ್ನು ಸರಿಯಾಗಿ ಮಾಡಿ ರೈತರ ಬೆಳೆಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ನೀರಾವರಿ ಸಚಿವರ ಬಳಿಗೆ ನಿಯೋಗ ತೆರಳೋಣ ಎಂದು ಸಿದ್ದೇಶಿ ವಡ್ನಳ್ಳಿ ಹೇಳಿದರು. ಅಕ್ರಮ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಬೇಕು ಎಂದು ಶಿವಕುಮಾರ್ ಹಳೇಬಾತಿ ಆಗ್ರಹಿಸಿದರು. ಐಸಿಸಿ ಸಭೆಯನ್ನು ದಾವಣಗೆರೆಯಲ್ಲೇ ಕರೆಯಬೇಕು ಎಂದು ಲೋಹಿತ್ ಒತ್ತಾಯಿಸಿದರು. ಮುಖಂಡರಾದ ಲೋಕಿಕೆರೆ ನಾಗರಾಜ್, ಬೆಳವನೂರು ನಾಗೇಶ್ವರ ರಾವ್, ಬಸವರಾಜ್ ಮಾತನಾಡಿದರು. ... (ಕೋಟ್) ಭದ್ರಾ ಜಲಾಶಯದ ರಕ್ಷಣೆ ಮತ್ತು ನೀರಿಗಾಗಿ ರೈತರು ಹೋರಾಟಕ್ಕೆ ಸಜ್ಜಾಗಬೇಕು. ಇದಕ್ಕಾಗಿ 15 ಜನರ ಸಮಿತಿಯನ್ನು ರಚಿಸಬೇಕು. ಸಮಿತಿಯವರು ಆಗಾಗ ಸಭೆ ಸೇರಿ ಚರ್ಚಿಸಬೇಕು. ಸರ್ಕಾರಕ್ಕೆ ನಿಯೋಗ ತೆಗೆದುಕೊಂಡು ಹೋಗಿ ಮನವರಿಕೆ ಮಾಡಿಕೊಡೋಣ. ಮುಂದಿನ ಪೀಳಿಗೆಯವರು ನಮ್ಮನ್ನು ಶಪಿಸದ ರೀತಿಯಲ್ಲಿ ನಮ್ಮ ಜವಾಬ್ದಾರಿಯನ್ನು ನಿಭಾಯಿಸೋಣ. ಎಸ್.ಎ. ರವೀಂದ್ರನಾಥ್, ಮಾಜಿ ಸಚಿವ