ನಿರ್ವಹಣೆ ಕೊರತೆ, ಜಲಾಶಯದ ನೀರು ಪೋಲು

dvg-bhadra-06_20240707004616513.jpg
Published on

ದಾವಣಗೆರೆ :  ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುವ ಗೇಟ್ (ರಿವರ್ ಸ್ಲೀವ್) ಅನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಸಾವಿರಾರು ಕ್ಯೂಸೆಕ್ ನೀರು ಪೋಲಾಗುತ್ತಿದ್ದು ಅಚ್ಚುಕಟ್ಟು ಭಾಗದ ರೈತರ ಆತಂಕಕ್ಕೆ ಕಾರಣವಾಗಿದೆ.  ಆ ಗೇಟನ್ನು ಕಾಲ ಕಾಲಕ್ಕೆ ನಿರ್ವಹಣೆ ಮಾಡಿ ಸುಸ್ಥಿತಿಯಲ್ಲಿಡಬೇಕು. ಹಾಗೆ ಮಾಡದ ಕಾರಣ ನೀರು ಪೋಲಾಗುವಂತಾಗಿದೆ. ಶುಕ್ರವಾರದ ವರೆಗೆ 5 ಸಾವಿರ ಕ್ಯೂಸೆಕ್ ನೀರು ಹೋಗಿತ್ತು ಎನ್ನಲಾಗಿದೆ. ದುರಸ್ತಿಯ ನಂತರ ಪೋಲಾಗುವ ಪ್ರಮಾಣ ಶನಿವಾರ 1 ಸಾವಿರ ಕ್ಯೂಸೆಕ್‌ಗೆ ಇಳಿದಿತ್ತು.  ಭದ್ರಾ ಯೋಜನೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ದುರಸ್ತಿಗೆ ಕ್ರಮ ಕೈಗೊಂಡಿದ್ದಾರೆ. ಈ ನಡುವೆ ಭದ್ರಾ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ದ್ಯಾವಪ್ಪ ರೆಡ್ಡಿ, ನಿರ್ದೇಶಕರಾದ ಮುದೇಗೌಡ್ರ ಗಿರೀಶ್, ದೇವೇಂದ್ರಪ್ಪ, ಹರೀಶ್ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಕಾರ್ಯವನ್ನು ವೀಕ್ಷಣೆ ಮಾಡಿದರು.  ಮುಖ್ಯ ಇಂಜಿನಿಯರ್ ಶಿವಾನಂದ ಬಣಕಾರ್, ಅಧೀಕ್ಷಕ ಇಂಜಿನಿಯರ್ ಸುಜಾತಾ, ಕಾರ್ಯ ನಿರ್ವಾಹಕ ಇಂಜಿನಿಯರ್ ರವಿಕುಮಾರ್ ಮತ್ತು ಸಿಬ್ಬಂದಿ ಇದ್ದರು.  ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಭದ್ರಾ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾಗುತ್ತಿದೆ. ಶುಕ್ರವಾರ ಬರೋಬ್ಬರಿ 16171 ಕ್ಯೂಸೆಕ್ ಒಳ ಹರಿವಿತ್ತು. ನೀರಿನ ಮಟ್ಟ 129.6 ಅಡಿ ಇತ್ತು. ಶನಿವಾರ 7736 ಕ್ಯೂಸೆಕ್ ಒಳಹರಿವಿದ್ದು 130.7 ಅಡಿ ನೀರಿನ ಮಟ್ಟ ಇತ್ತು.  ...  (ಕೋಟ್)  ನದಿಗೆ ನೀರು ಬಿಡುವ ಗೇಟುಗಳನ್ನು ವರ್ಷಕ್ಕೊಮ್ಮೆ ಸ್ವಚ್ಛಗೊಳಿಸಿ, ಸೆಇಯಾಗಿ ನಿರ್ವಹಣೆ ಮಾಡಬೇಕು. ಆದರೆ ಕಳೆದ 14 ವರ್ಷಗಳಿಂದ ಅಧಿಕಾರಿಗಳು ನಿರ್ವಹಣೆ ಮಾಡದ ಕಾರಣ ಈಗ ಸಮಸ್ಯೆ ಎದುರಿಸಬೇಕಾಗಿದೆ. ದುರಸ್ತಿ ಕಾರ್ಯವನ್ನು ಬೇಸಿಗೆಯಲ್ಲೇ ಮಾಡಬೇಕಿತ್ತು. ಈಗ ನೀರಿನ ಒಳಹರಿವು ಜಾಸ್ತಿ ಇರುವಾಗ ಮಾಡುವುದು ಮೂರ್ಖತನ.   ಎಚ್.ಆರ್. ಲಿಂಗರಾಜ್ ಶಾಮನೂರು, ಭಾರತೀಯ ರೈತ ಒಕ್ಕೂಟ ದಾವಣಗೆರೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net