

ರಮೇಶ ಜಹಗೀರದಾರ್ ದಾವಣಗೆರೆ
ಬೆಳಗ್ಗೆಯಿಂದ ಸಂಜೆಯ ವರೆಗೆ ದುಡಿಮೆ. ರಾತ್ರಿ ವೇಳೆ ತಳ್ಳುಗಾಡಿಗಳಲ್ಲಿ ಕೊಡಗಳನ್ನಿಟ್ಟು ಕುಡಿಯುವ ನೀರು ತುಂಬಿಸಿಕೊಳ್ಳಲು ಸರದಿ ಸಾಲಲ್ಲಿ ಕಾಯುವುದೇ ಕಾಯಕ. ಗಂಟೆಗಟ್ಟಲೆ ಕಾದರೂ ನೀರು ಎಷ್ಟು ಸಿಗುತ್ತದೆ ಎಂಬ ಖಾತ್ರಿಯಿಲ್ಲ.
ಇದು, ಜಗಳೂರು ತಾಲೂಕು ಹುಚ್ಚಂಗಿಪುರ ಗ್ರಾಮದ ಜನರ ನಿತ್ಯದ ಗೋಳು. 5 ಸಾವಿರ ಜನಸಂಖ್ಯೆಯ ಈ ಊರಿನಲ್ಲಿ ಒಟ್ಟು 13 ಕೊಳವೆಬಾವಿಗಳಿದ್ದು ಆ ಪೈಕಿ 11 ಬೋರ್ಗಳು ವಿಫಲವಾಗಿವೆ. 2 ಮಾತ್ರ ಕೆಲಸ ಮಾಡುತ್ತಿದ್ದು ಇಡೀ ಗ್ರಾಮದ ಜನರು ಅವುಗಳನ್ನೇ ಅವಲಂಬಿಸಿದ್ದಾರೆ. ಅಂದ ಹಾಗೆ ಇದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರ ಊರು.
ಬರಗಾಲ ಮತ್ತು ಬಿರು ಬೇಸಿಗೆಯಿಂದಾಗಿ ಅಂತರ್ಜಲ ಕುಸಿತವಾಗಿದೆ. ಇದರಿಂದಾಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ. ಮಹಿಳೆಯರು, ಮಕ್ಕಳು ರಾತ್ರಿ ನಿದ್ದೆಗೆಟ್ಟು ನೀರು ಹಿಡಿಯಬೇಕಿದೆ.
ಹುಚ್ಚಂಗಿಪುರದ ಈ ಚಿತ್ರಣ ಒಂದು ಉದಾಹರಣೆ ಮಾತ್ರ. ಜಿಲ್ಲೆಯ ಬಹಳಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಸಾವಿರ ಅಡಿ ಆಳ ಕೊರೆದರೂ ನೀರು ಸಿಗುತ್ತಿಲ್ಲ. ಹೀಗಾಗಿ ಜಿಲ್ಲಾಡಳಿತ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯುತ್ತಿದೆ.
ಜಿಲ್ಲೆಯ 43 ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. 5 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇದಕ್ಕಾಗಿ 5 ಖಾಸಗಿ ಟ್ಯಾಂಕರ್ಗಳನ್ನು ಬಳಕೆ ಮಾಡಲಾಗುತ್ತಿದೆ. 89 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು 59 ಗ್ರಾಮಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ.
...
ಎಲ್ಲೆಲ್ಲಿ ಟ್ಯಾಂಕರ್ ನೀರು?
ಚನ್ನಗಿರಿ ತಾಲೂಕು ಕಂಚಿಗನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟಕಡೂರು ಮತ್ತು ಹರಳಘಟ್ಟ, ನ್ಯಾಮತಿ ತಾಲೂಕು ಫಲವನಹಳ್ಳಿ, ಜಗಳೂರು ತಾಲೂಕು ಗುತ್ತಿದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಕುಲಹಟ್ಟಿ ಹಾಗೂ ದಿದ್ದಿಗಿ ಗ್ರಾಮ ಪಂಚಾಯಿತಿಯ ಹುಚ್ಚಂಗಿಪುರ.
ಹುಚ್ಚಂಗಿಪುರ ಗ್ರಾಮಕ್ಕೆ 1 ಟ್ಯಾಂಕರ್ನಿಂದ 10 ಟ್ರಿಪ್ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಜಿ.ಪಂ. ಮೂಲಗಳು ಮಾಹಿತಿ ನೀಡಿವೆ. ಆದರೆ ಆ ಊರಿಗೆ ಟ್ಯಾಂಕರ್ ನೀರು ಸರಬರಾಜು ಆಗುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.