ಎಲ್ಲರನ್ನೂ ತಲುಪಲಿ ವಿವೇಕ ಸಂದೇಶ

DVG-VIVEKADARA_20240928010155681.jpg
Published on

ದಾವಣಗೆರೆ : ವಿವೇಕಧಾರಾ ಕೃತಿ ವಿವೇಕಾನಂದರ ಜೀವನ ಸಂದೇಶದ ಜತೆಗೆ ಮಾರ್ಗದರ್ಶನ ನೀಡುತ್ತದೆ ಎಂದು ರಾಮಕೃಷ್ಣ ಮಿಷನ್ ಕಾರ್ಯದರ್ಶಿ ತ್ಯಾಗೀಶ್ವರಾನಂದ ಸ್ವಾಮೀಜಿ ಹೇಳಿದರು.  ರಾಮಕೃಷ್ಣಸ್ವಾಮಿ ವಿವೇಕಾನಂದ ಭಕ್ತ ವೃಂದದಿಂದ ನಗರದ ರಿಂಗ್ ರಸ್ತೆಯ ಶಾರದಾಂಬ ದೇಗುಲ ಹತ್ತಿರದ ಶಂಕರ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವೇಕಧಾರಾ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.  ಸ್ವಾಮಿ ವಿವೇಕಾನಂದ ಅವರ ಜೀವನ ಮತ್ತು ಸಂದೇಶಗಳ ಗುಚ್ಛವಾಗಿರುವ ಕೃತಿಯ ನಿರೂಪಣೆ ಇಷ್ಟವಾಗುತ್ತದೆ. ಪುಸ್ತಕ ಹೊರತಂದಿರುವುದು ಹರ್ಷದ ಸಂಗತಿ. ವಿವೇಕಾನಂದ ಅವರ ಸಂದೇಶ ಎಲ್ಲರಿಗೂ ತಲುಪಬೇಕು ಎಂದು ತಿಳಿಸಿದರು.  ಕೃತಿಯ ಪ್ರತಿಯೊಂದು ಲೇಖನವೂ ಚಿಂತನಾಶೀಲ ಬರಹದಿಂದ ಕೂಡಿದೆ. ಇದರಲ್ಲಿನ ವಿಚಾರಗಳು ಅಮೃತಧಾರೆಯಾಗಿ ಹರಿಯಬೇಕು. ಪ್ರತಿಯೊಬ್ಬರೂ ಇದನ್ನು ಅಧ್ಯಯನ ಮಾಡಬೇಕು ಎಂದರು.  ಕೃತಿಕಾರ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಪ್ರಕಟಿತ ಬಿಡಿ ಲೇಖನಗಳನ್ನು ಓದಿದ ಅನೇಕರು ಪುಸ್ತಕ ರೂಪದಲ್ಲಿ ಹೊರತರಲು ಸಲಹೆ ನೀಡಿದ್ದರು. ಮಾತೃಭಾಷೆ ತೆಲುಗು ಆಗಿದ್ದರೂ ಕನ್ನಡವನ್ನು ಇಷ್ಟಪಟ್ಟು ಬರೆದಿದ್ದೇನೆ ಎಂದು ಹೇಳಿದರು.  ರಾಣೇಬೆನ್ನೂರು ರಾಮಕೃಷ್ಣ ಆಶ್ರಮದ ಪ್ರಕಾಶಾನಂದ ಸ್ವಾಮೀಜಿ, ಶಾರದೇಶಾನಂದ ಸ್ವಾಮೀಜಿ, ಎನ್.ಎಂ. ಶಾಂತಿನಾಥ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ವೈದ್ಯೆ ಡಾ.ಶಶಿಕಲಾ ಕೃಷ್ಣಮೂರ್ತಿ, ಎಂವಿಪಿಯು ಕಾಲೇಜು ಕಾರ್ಯದರ್ಶಿ ಎಸ್.ಜೆ.ಶ್ರೀಧರ್, ಡಾ.ಬಿ.ಟಿ.ಅಚ್ಯುತ್, ವೀರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net