

ದಾವಣಗೆರೆ : ತಾಲೂಕಿನ ಕಡರಪ್ಪನಹಟ್ಟಿ ಗ್ರಾಮದ ಜಿಗಲಯ್ಯನ ಕಟ್ಟೆ ಬಳಿ 5 ಕೋಟಿ ರೂ. ವೆಚ್ಚದಲ್ಲಿ ಮಿನಿ ಜಲಾಶಯ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ ಶಾಸಕರು ದುಸ್ಥಿತಿಯಲ್ಲಿರುವ ಚೆಕ್ ಡ್ಯಾಂ ಪ್ರದೇಶವನ್ನು ವೀಕ್ಷಿಸಿ ಪರಿಶೀಲನೆ ನಡೆಸಿದರು. ಇಲ್ಲಿನ ಚೆಕ್ ಡ್ಯಾಂ ಹಳೆಯದಾಗಿದ್ದು, ಮಳೆ ನೀರು ಸಂಗ್ರಹವಾಗುತ್ತಿಲ್ಲ. ನೀರು ಸೋರಿಕೆಯಾಗಿ ಹನಿ ನೀರು ಇಲ್ಲದಂತೆ ಖಾಲಿಯಾಗುತ್ತದೆ. ಇದರಿಂದ ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತದೆ ಎಂದು ಗ್ರಾಮಸ್ಥರು ಶಾಸಕರಿಗೆ ತಿಳಿಸಿದರು. ಗುಡ್ಡದ ಇಳಿಜಾರಿನಲ್ಲಿರುವ ಚೆಕ್ ಡ್ಯಾಂ ನೂರಾರು ಎಕರೆ ಪ್ರದೇಶ ಹೊಂದಿದೆ. ಇಲ್ಲಿ ಮಿನಿ ಜಲಾಶಯ ನಿರ್ಮಿಸಿದರೆ ಒಂದೇ ಮಳೆಗೆ ಭರ್ತಿಯಾಗುತ್ತದೆ. ಇದರಿಂದ ಅಂತರ್ಜಲ ಹೆಚ್ಚಾಗಿ ಸುಮಾರು 40 ಹಳ್ಳಿಗಳಿಗೆ ನೀರೊದಗಿಸಬಹುದು ಎಂದು ಶಾಸಕರಿಗೆ ಮನವರಿಕೆ ಮಾಡಿದರು. ಗುಡ್ಡಗಳ ಇಳಿಜಾರಿನಲ್ಲಿ ಕೆರೆ-ಕಟ್ಟೆ, ಚೆಕ್ ಡ್ಯಾಂ ಹಾಗೂ ಮಿನಿ ಜಲಾಶಯಗಳನ್ನು ನಿರ್ಮಿಸಿದರೆ ಭವಿಷ್ಯದಲ್ಲಿ ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿಸಬಹುದು. ಈ ಬಗ್ಗೆ ಜಲಸಂಪನ್ಮೂಲ ಮತ್ತು ಸಣ್ಣ ನೀರಾವರಿ ಸಚಿವರ ಬಳಿ ಚರ್ಚಿಸಿ ಕ್ಷೇತ್ರದ ಅವಶ್ಯವಿರುವ ಕಡೆ ಮಿನಿ ಜಲಾಶಯ ನಿರ್ಮಿಸಲು ಆದ್ಯತೆ ನೀಡುವುದಾಗಿ ಶಾಸಕರು ತಿಳಿಸಿದರು. ಈಗಾಗಲೇ ಕ್ಷೇತ್ರದ 10 ರಿಂದ 15 ಕಡೆಗಳಲ್ಲಿ ಗುಡ್ಡಗಳ ಇಳಿಜಾರು ಪ್ರದೇಶಗಳನ್ನು ಗುರುತಿಸಿದ್ದು, ಅಲ್ಲಿ ಮಿನಿ ಜಲಾಶಯ ನಿರ್ಮಾಣ ಮಾಡಿದರೆ ಬೇಸಿಗೆ ಕಾಲದಲ್ಲಿ ಕ್ಷೇತ್ರದಲ್ಲಿ ಉದ್ಭವಿಸಬಹುದಾದ ನೀರಿನ ಸಮಸ್ಯೆ ನೀಗಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಒತ್ತಡ ಹಾಕಿ ಅನುದಾನ ತಂದು ಮಿನಿ ಜಲಾಶಯ ನಿರ್ಮಿಸಲು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಕಾಂಗ್ರೆಸ್ ಮುಖಂಡ ಗುಮ್ಮನೂರು ಶಂಭಸಣ್ಣ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಇದ್ದರು.