

ದಾವಣಗೆರೆ : ಮಳೆ, ಗಾಳಿಯಿಂದ ಬೆಳೆ ಹಾನಿಯಾಗಿರುವ ತೋಟಗಳಿಗೆ ಭೇಟಿ ನೀಡಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವ ಮೂಲಕ ಪರಿಹಾರ ವಿತರಣೆಗೆ ಕ್ರಮ ತೆಗೆದುಕೊಳ್ಳುವಂತೆ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಅಣಬೇರು ಗ್ರಾಮದಲ್ಲಿ ಫಲಕ್ಕೆ ಬಂದ 150ರಿಂದ 200 ಅಡಕೆ ಮರಗಳು ಸೋಮವಾರ ರಾತ್ರಿ ಮಳೆ, ಗಾಳಿಯಿಂದ ಧರೆಗುರುಳಿದ್ದು ಆ ಸ್ಥಳಕ್ಕೆ ಶಾಸಕ ಬಸವಂತಪ್ಪ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಇದೇ ವೇಳೆ ರೈತರು ತಮ್ಮ ಅಹವಾಲು ತೋಡಿಕೊಂಡರು. ಅಡಕೆ ಮರಗಳು ನೆಲಕ್ಕುರುಳಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಶಾಸಕರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕ ದೂರವಾಣಿ ಮೂಲಕ ಅಧಿಕಾರಿಗಳೊಂದಿಗೆ ಮಾತನಾಡಿದರು.
ಕ್ಷೇತ್ರದ ರೈತರು ಬೆಳೆ ವಿಮೆ ಕಟ್ಟಿದ್ದಾರೆ. ಆದರೆ ಈ ಬಾರಿ ಬರಗಾಲದಿಂದ ಕೃಷಿಕರು ಕಂಗಾಲಾಗಿದ್ದಾರೆ. ಕೆಲವು ಗ್ರಾಪಂ ವ್ಯಾಪ್ತಿಯಲ್ಲಿ ವಿಮಾ ಹಣ ಪಾವತಿಸಿದರೆ, ಇನ್ನು ಕೆಲವು ಗ್ರಾಪಂಗಳಲ್ಲಿ ನೀಡಿಲ್ಲ. ಈಗ ಗಾಳಿ, ಮಳೆಗೆ ಬೆಳೆ ಹಾನಿಯಾಗಿರುವ ರೈತರು ಬೆಳೆ ವಿಮೆ ಕಟ್ಟಿದ್ದು, ಕೂಡಲೇ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಂದ ಬೆಳೆ ಹಾನಿ ವರದಿ ತರಿಸಿಕೊಂಡು ವಿಮೆ ಹಣ ಪಾವತಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಂತರ ಅಣಬೇರು ಗ್ರಾಮದ ಶಿಥಿಲಗೊಂಡ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲೆಯ ಕೊಠಡಿಗಳು ಶಿಥಿಲಗೊಂಡಿದ್ದು ಮಳೆ ಬಂದಾಗ ಸೋರುತ್ತವೆ ಎಂದು ಗ್ರಾಮಸ್ಥರು ಗಮನ ಸೆಳೆದರು. ಇದೇ ವೇಳೆ ಹೈಟೆಕ್ ಶೌಚಗೃಹ ಕಾಮಗಾರಿ ಕಳಪೆ ಆಗಿರುವುದನ್ನು ಕಂಡು ಶಾಸಕರು ಗುತ್ತಿಗೆದಾರನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಅಣಬೇರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬುಡೆನ್ ಸಾಬ್, ಸದಸ್ಯ ಮಹಾರುದ್ರಪ್ಪ, ಜಾಫರ್ ಶರೀಫ್, ರೈತರು, ಗ್ರಾಮಸ್ಥರು ಇದ್ದರು.
ಲಕ್ಷಾಂತರ ರೂ. ಖರ್ಚು ಮಾಡಿ ಬೋರ್‌ವೆಲ್ ಕೊರೆಸಿದರೂ ನೀರು ಸಿಗದೆ ಅಸಹಾಯಕನಾದ ಹೊನ್ನಾಯಕನಹಳ್ಳಿ ಗ್ರಾಮದ ರೈತ ಶಾಸ್ತ್ರಿಹಳ್ಳಿ ಬಸವರಾಜಪ್ಪ 2 ಎಕರೆಯಲ್ಲಿ ಬೆಳೆದಿದ್ದ ಅಡಕೆ ಮರಗಳನ್ನು ಕಡಿದು ಸುಟ್ಟು ಹಾಕಿದ್ದ ಸ್ಥಳಕ್ಕೆ ಬಸವಂತಪ್ಪ ಭೇಟಿ ನೀಡಿ, ರೈತನಿಗೆ ಧೈರ್ಯ ತುಂಬಿದರು. ಎಚ್.ಡಿ. ಕಿರಣಕುಮಾರ್, ದೇವೇಂದ್ರಪ್ಪ, ಸಿದ್ದೇಶ್, ಹನುಮಂತಪ್ಪ, ಸಿದ್ದಪ್ಪ ಇದ್ದರು.