

ಜಗಳೂರು : ತ್ಯಾಜ್ಯ ನೀರು ಹರಿಯಲು ಚರಂಡಿಗಳಿಲ್ಲ, ವಾರದಿಂದ ಸರಿಯಾಗಿ ಕುಡಿಯವ ನೀರು ಪೂರೈಕೆಯಿಲ್ಲ, ಪೈಪ್‌ಲೈನ್ ಮಾಡಲು ಗುಂಡಿ ಅಗೆದು ಮುಚ್ಚಿಲ್ಲ, ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಕಳಪೆಯಾಗಿದೆ. ಹೀಗೆ ಅಧಿಕಾರಿಗಳ ಮುಂದೆ ಸಮಸ್ಯೆಗಳ ಸರಮಾಲೆಯನ್ನೇ ಗ್ರಾಮಸ್ಥರು ತೆರೆದಿಟ್ಟರು. ತಾಲೂಕಿನ ಜಗಳೂರು ಗೊಲ್ಲರಹಟ್ಟಿ ಗ್ರಾಮಕ್ಕೆ ಮಂಗಳವಾರ ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಗ್ರಾ.ಪಂ ಸದಸ್ಯರು, ಮಹಿಳೆಯರು ಹಾಗೂ ಮುಖಂಡರು ಗ್ರಾಮದ ಅವ್ಯವಸ್ಥೆ ಬಗ್ಗೆ ದೂರಿದರು. ಗ್ರಾಮದ ಮುಖ್ಯರಸ್ತೆಯಲ್ಲಿ ಡಕ್ ಹಾಳಾಗಿ ತಗ್ಗು ಬಿದ್ದು, ಕಬ್ಬಿಣದ ರಾಡುಗಳು ಹೊರಗೆ ಬಂದಿವೆ. ವರ್ಷದಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಗ್ರಾಪಂ ಅಧಿಕಾರಿಗಳು ದುರಸ್ತಿಪಡಿಸಿಲ್ಲ. ಚಿಕ್ಕ ಮಕ್ಕಳು, ವೃದ್ಧರು ಓಡಾಡಲು ಭಯಪಡುವಂತಾಗಿದೆ. ಶೀಘ್ರ ಹೊಸ ಡಕ್ ಮಾಡಿಸಿಕೊಡಿ ಎಂದು ಮನವಿ ಮಾಡಿದರು. ಮೋಟರ್ ಪಂಪ್‌ಸೆಟ್ ಸುಟ್ಟಿದ್ದು, ಅದರ ದುರಸ್ತಿಗೆ ಮೀನಮೇಷ ಎಣಿಸಲಾಗುತ್ತಿದೆ. ಇದರಿಂದ ಕುಡಿಯುವ ನೀರಿಲ್ಲದೇ ಜನತೆ ಅಲೆದಾಡುವಂತಾಗಿದೆ ಎಂದು ಗ್ರಾಮದ ನಿವಾಸಿ ರೇಖಾ ಸಿಇಒ ಮುಂದೆ ಅಳಲು ತೋಡಿಕೊಂಡರು. ಆದಷ್ಟು ಬೇಗ ಸರಿಪಡಿಸಿ ನೀರು ಪೂರೈಕೆ ಮಾಡಿ, ಚರಂಡಿಯಲ್ಲಿ ಹಾದು ಹೋಗಿರುವ ಕುಡಿಯುವ ನೀರಿನ ಪೈಪ್ ತೆರವುಗೊಳಿಸಿ ಎಂದು ಸಿಇಒ ಅವರು ಪಿಡಿಒ ಕೊಟ್ರೇಶ್‌ಗೆ ಸೂಚಿಸಿದರು. 15 ನೇ ಹಣಕಾಸು ಯೋಜನೆಯಡಿ 3 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ನಡೆಸಲು ಅನುಮೋದನೆಗೆ ಕಳಿಸಲಾಗಿದೆ. ಬಂದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಪಿಡಿಒ ಹೇಳಿದರು. ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿ ಅಳವಡಿಕೆ ಕಾಮಗಾರಿಯ ವಿಳಂಬಕ್ಕೆ ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರನಿಗೆ ಸಿಇಒ ಎಚ್ಚರಿಕೆ ನೀಡಿದರು. ವಕೀಲ ಡಿ.ಶ್ರೀನಿವಾಸ್ ಮನವಿಗೆ ಸ್ಪಂದಿಸಿದ ಸಿಇಒ, ತಕ್ಷಣ ಗ್ರಂಥಾಲಯ ಆರಂಭಿಸಿ. ಬೇಕಾದ ಆಸನ, ಟೇಬಲ್, ಪುಸ್ತಕ ಸೇರಿ ಅಗತ್ಯ ಸೌಕರ್ಯ ನೀಡಲಾಗುವುದು ಎಂದು ಪಿಡಿಒಗೆ ತಿಳಿಸಿದರು. ಈ ಸಂದರ್ಭದಲ್ಲಿ ತಾ.ಪಂ ಇಒ ಕೆಂಚಪ್ಪ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸಾದಿಕ್‌ಉಲ್ಲಾ, ಸದಸ್ಯರಾದ ಕುಬೇರಪ್ಪ, ರವಿಕುಮಾರ್, ಮಮತಾ ರಾಕೇಶ್, ರಘು, ಮಂಜುನಾಥ್ ಮತ್ತಿತರರಿದ್ದರು.