ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಭೇಟಿ

chn-Thavarekere-visit.jpg
Published on

ಚನ್ನಗಿರಿ : ಚನ್ನಗಿರಿ ತಾಲೂಕು ತಾವರೆಕೆರೆ ಗ್ರಾಮದಲ್ಲಿ ತಾಲಿಬಾನ್ ಮಾದರಿಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದ ಘಟನಾ ಸ್ಥಳಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಡಾ.ಅರ್ಚನಾ ಮಜುಮ್‌ದಾರ್ ಸೋಮವಾರ ಭೇಟಿ ನೀಡಿ, ಹಲ್ಲೆಗೊಳಗಾದ ಮಹಿಳೆಗೆ ಸಾಂತ್ವನ ಹೇಳಿದರು.  ಗ್ರಾಮದ ಜಾಮಿಯಾ ಮಸೀದಿ ಬಳಿ ತೆರಳಿ, ಅಲ್ಲಿನ ಮುಖಂಡರು, ಧರ್ಮ ಗುರುಗಳಿಂದ ಮಾಹಿತಿ ಪಡೆದರು. ಹಲ್ಲೆಗೊಳಗಾದ ಮಹಿಳೆಯನ್ನು ಮಾತನಾಡಿಸಿದರು.  ಸ್ಥಳ ಪರಿಶೀಲನೆ ನಂತರ ಶಿಲಾ ಮಠದ ಸಭಾಂಗಣದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ, ಏ. 9ರಂದು ಹತ್ತಾರು ಜನರು ಸೇರಿಕೊಂಡು ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯವಾಗಿದ್ದು ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿದೆ. ಈ ಅಮಾನವೀಯ ಘಟನೆಯ ವಿಡಿಯೋ ದೇಶ ವಿದೇಶಗಳಲ್ಲಿ ವೈರಲ್ ಆಗಿದೆ. ಇಂಥ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ ಎಂದು ತಿಳಿಸಿದರು.  ...    (ಬಾಕ್ಸ್)  ಕಾರಿಗೆ ಅಡ್ಡಗಟ್ಟಿ ಪ್ರತಿಭಟನೆ  ರಾಷ್ಟ್ರೀಯ ಮಹಿಳಾ ಅಯೋಗದ ಸದಸ್ಯೆ ಅರ್ಚನಾ ಮಜುಮ್‌ದಾರ್ ಸ್ಥಳ ಪರಿಶೀಲನೆ ಮಾಡಿ ವಾಹನ ಹತ್ತುತ್ತಿದ್ದಂತೆ ಗ್ರಾಮದ ಮಹಿಳೆಯೊಬ್ಬರು ಕಾರಿಗೆ ಅಡ್ಡವಾಗಿ ನಿಂತು ಪ್ರತಿಭಟನೆ ನಡೆಸಿದರು.  ಮಹಿಳೆ ಮೇಲೆ ನಡೆದ ಹಲ್ಲೆ ಸಂಬಂಧ ಚನ್ನಗಿರಿ ಪೊಲೀಸರು ಕೆಲವು ಅಮಾಯಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಘಟನೆಯಲ್ಲಿ ಇರದಿದ್ದರೂ ಬಂಧಿಸಿದ್ದಾರೆ, ಅವರನ್ನು ಬಿಡಲು ಹೇಳಿ ಎಂದು ಒತ್ತಾಯಿಸಿದರು. ನೂರಾರು ಮಹಿಳೆಯರು ಅವರ ಜತೆಗೂಡಿದರು. ಇದರಿಂದ ಸ್ವಲ್ಪ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.  ಈ ಸಂದರ್ಭದಲ್ಲಿ ಡಾ.ಅರ್ಚನಾ ಮಜುಮ್‌ದಾರ್ ಮಾತನಾಡಿ, ಮಹಿಳೆ ಮೇಲೆ ನಡೆದ ಹಲ್ಲೆಯನ್ನು ಸಹಿಸುವುದಿಲ್ಲ. ಸಂತ್ರಸ್ತರು ಜೀವನ ನಡೆಸುವುದು ಕಷ್ಟವಾಗಿದೆ. ಒಬ್ಬ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ, ಅವರಿಗೆ ಅಯೋಗದಿಂದ ಸಹಾಯ ಮಾಡಲಾಗುವುದು ಎಂದರು.  ತಹಸೀಲ್ದಾರ್ ಎನ್.ಜೆ. ನಾಗರಾಜ್, ಎಸಿಪಿ ಸ್ಯಾಮ್ ವರ್ಗಿಸ್, ಸಿಡಿಪಿಒ ನಿರ್ಮಲಾ ಬಾಯಿ, ಪಿಎಸ್‌ಐ ರೂಪ್ಲಿಬಾಯಿ ಇದ್ದರು.  ...    (ಬಾಕ್ಸ್... ದಾವಣಗೆರೆ ವರದಿ)  ಅಗತ್ಯ ಕ್ರಮಕ್ಕೆ ಸೂಚನೆ  ನಂತರ ದಾವಣಗೆರೆಯ ಸಖಿ ಒನ್ ಸ್ಟಾಪ್ ಸೆಂಟರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಅರ್ಚನಾ ಮಜುಮ್‌ದಾರ್, ತಾವರೆಕೆರೆ ಘಟನೆಯಲ್ಲಿ 12 ರಿಂದ 14 ಮಂದಿ ಸಾರ್ವಜನಿಕವಾಗಿ ಮಹಿಳೆಯ ಮೇಲೆ ಕೋಲು, ಟ್ಯೂಬ್, ಪೈಪ್, ಎಲೆಕ್ಟ್ರಿಕ್ ವೈರ್ ಮುಂತಾದ ವಸ್ತುಗಳಿಂದ ಹಲ್ಲೆ ನಡೆಸಿರುವುದು ಆತಂಕಕಾರಿಯಾಗಿದೆ ಎಂದರು.  ಆಯೋಗವು ಈ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಎಸ್ಪಿ ಅವರಿಗೆ ಸೂಚನೆ ನೀಡಿದ ನಂತರ 6 ಜನರನ್ನು ಪೊಲೀಸರು ಬಂಧಿಸಿದ್ದು ಇನ್ನೂ ಕೆಲವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.  ವಿಡಿಯೋನಲ್ಲಿ ಇಲ್ಲದ ಇನ್ನೊಬ್ಬ ಮಹಿಳೆಯ ಮೇಲೂ ಕೆಟ್ಟದಾಗಿ ಹಲ್ಲೆ ನಡೆಸಲಾಗಿದೆ. ಆಕೆಗೆ ಆಗಿರುವ ಗಾಯಗಳನ್ನು ನಾನು ನೋಡಿದೆ. ಇದು ಕಲ್ಪಿಸಿಕೊಳ್ಳಲೂ ಆಗದಂಥ ಭೀಕರ ಘಟನೆಯಾಗಿದೆ. ಆಯೋಗ ಹಾಗೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.  ಅಲ್ಲಿನ ಮಹಿಳೆಯರು ಒಂದಿಲ್ಲ ಒಂದು ರೀತಿಯ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರೂ ಅದನ್ನು ಸಹಿಸಿಕೊಂಡಿದ್ದಾರೆ. ಜಾಗೃತಿಯ ಕೊರತೆಯೇ ಇದಕ್ಕೆ ಕಾರಣವಾಗಿದೆ. ಸರ್ಕಾರದ ಹಲವು ಯೋಜನೆಗಳಿದ್ದು ಅವುಗಳು ಅವರಿಗೆ ತಲುಪಬೇಕಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net