

ದಾವಣಗೆರೆ : ರಾಜ್ಯದ ಜನರು ಸಿದ್ದರಾಮಯ್ಯ ಅವರ ಪರ ನಿಲ್ಲುವ ಮೂಲಕ ಷಡ್ಯಂತ್ರ ಕೊನೆಗೊಳಿಸಬೇಕಿದೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಹೇಳಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದೇವರಾಜ ಅರಸು ಸಿಎಂ ಆಗಿದ್ದಾಗ ಶೋಷಿತರು, ಹಿಂದುಳಿದವರಿಗೆ ಶಾಸಕ, ಸಚಿವ ಸ್ಥಾನ ನೀಡಿದ್ದರು. ಈ ಕಾರಣಕ್ಕೆ ಮೇಲ್ವರ್ಗದವರು ಸಂಚು ರೂಪಿಸಿ ಅಧಿಕಾರದಿಂದ ಕೆಳಗಿಳಿಸಿದರು. ಎಸ್. ಬಂಗಾರಪ್ಪ ಸಿಎಂ ಆಗಿದ್ದಾಗಲೂ ಇದು ಮುಂದುವರಿಯಿತು. ಅಹಿಂದ ನಾಯಕರನ್ನು ವ್ಯವಸ್ಥಿತವಾಗಿ ಮುಗಿಸುವ ಷಡ್ಯಂತ್ರ ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ. ಹಲವು ಭಾಗ್ಯಗಳು, ಗ್ಯಾರಂಟಿ ಯೋಜನೆಗಳನ್ನು ನೀಡಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳಿಯುವ ಕುತಂತ್ರ ರೂಪಿಸಲಾಗಿದೆ. ಶೋಷಿತರು, ಹಿಂದುಳಿದವರು, ಬಡವರು ರಾಜಕೀಯಕ್ಕೆ ಬರಬಾರದೆಂಬ ನಿಟ್ಟಿನಲ್ಲಿ ತುಳಿಯುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ. ರಾಜಕೀಯದಲ್ಲಿ ಕಪ್ಪು ಚುಕ್ಕೆ ಇಲ್ಲದ ಅಹಿಂದ ವರ್ಗದ ನಾಯಕನ ವಿರುದ್ಧದ ಕುತಂತ್ರ ಫಲಿಸದು. ನ್ಯಾಯಾಲಯದ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಆರೋಪ ಮುಕ್ತರಾಗಿ ಸಿದ್ದರಾಮಯ್ಯ ಹೊರ ಬರಲಿದ್ದಾರೆ ಎಂದು ತಿಳಿಸಿದ್ದಾರೆ.