

ಮಾಯಕೊಂಡ : ಹೋಬಳಿ ವ್ಯಾಪ್ತಿಯ ಮಳಲ್ಕೆರೆ ಗ್ರಾಪಂ ಆವರಣದಲ್ಲಿ 2024 -25 ನೇ ಸಾಲಿನ ನರೇಗಾ ಹಾಗೂ 15ನೇ ಹಣಕಾಸು ಯೋಜನೆ ಕಾಮಗಾರಿಗಳ ಲೆಕ್ಕಪರಿಶೋಧನೆ ಗ್ರಾಮಸಭೆ ನಡೆಯಿತು. ಪ್ರಸಕ್ತ ವರ್ಷದ ನರೇಗಾ ಹಾಗೂ 15ನೇ ಹಣಕಾಸು ಯೋಜನೆಯಲ್ಲಿ ಮಳಲ್ಕೆರೆ ಗ್ರಾಪಂ ವ್ಯಾಪ್ತಿಗೆ ಸೇರಿದ ಮಳಲ್ಕೆರೆ, ಕಾಶಿಪುರ, ರಾಜಗಾರಿ, ಕಾಶಿಪುರ ಕ್ಯಾಂಪ್‌ಗಳಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳು ಮತ್ತು ಅವುಗಳಿಗೆ ಮೀಸಲಿರಿಸಿದ ಹಣಕಾಸಿನ ಸಂಕ್ಷಿಪ್ತ ಮಾಹಿತಿಯನ್ನು ಪಿಡಿಒ ಎಂ.ವಿ. ರೂಪಾ ಸಭೆ ಮುಂದಿಟ್ಟರು. ಗ್ರಾಪಂ ಅಧ್ಯಕ್ಷೆ ಸರಸ್ವತಿ ಅರುಣಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಸಭೆ ಸಾಮಾಜಿಕ ಪರಿಶೋಧನಾ ನೋಡಲ್ ಅಧಿಕಾರಿಗಳಾದ ವಂದನಾ, ತಾಲೂಕು ಸಂಯೋಜಕಿ ವಾಣಿ, ತಾಂತ್ರಿಕ ಸಹಾಯಕ ಅಭಿಯಂತರ ವಾಗೀಶ್, ಗ್ರಾಪಂ ಸದಸ್ಯರು ಇದ್ದರು.