ಸಾಧನೆಗಳ ಬಲದಿಂದ ಪ್ರಶಸ್ತಿಯ ಗರಿ

mudahadadi.jpg
Published on

ದಾವಣಗೆರೆ : ಘನತ್ಯಾಜ್ಯ ವಿಲೇವಾರಿ, ಗ್ರಾಮೀಣ ಉದ್ಯಾನವನ, ಡಿಜಿಟಲ್ ಲೈಬ್ರರಿ, ಸೌರ ವಿದ್ಯುತ್ ಬಳಕೆ, ಸ್ಮಶಾನಗಳ ಅಭಿವೃದ್ಧಿ.
 ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವ ದಾವಣಗೆರೆ ತಾಲೂಕು ಮುದಹದಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಿರುವ ಪ್ರಮುಖ ಸಾಧನೆಗಳಿವು. ಗ್ರಾಮೀಣ ಜನರಿಗೆ ಉಪಯುಕ್ತವಾದ ಯೋಜನೆಗಳನ್ನು ಕಾರ್ಯಗತಗೊಳಿಸುವ ಮೂಲಕ ಈ ಗ್ರಾ.ಪಂ. ಗಮನ ಸೆಳೆದಿದೆ.
 ಸ್ವಸಹಾಯ ಸಂಘಗಳ ಜತೆಗೆ ಒಡಂಬಡಿಕೆ ಮಾಡಿಕೊಂಡು ಮನೆ ಮನೆಯಿಂದ ಒಣ ಕಸ ಸಂಗ್ರಹ ಮಾಡಲಾಗುತ್ತಿದ್ದು, ಆ ಕಸವನ್ನು ಮಾರಾಟ ಮಾಡಿ ಅದರಿಂದ ಆದಾಯ ಬರುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.
 ಜರೇಕಟ್ಟೆ ಗ್ರಾಮದಲ್ಲಿ ಅಭಿವೃದ್ಧಿಪಡಿಸಿರುವ ಗ್ರಾಮೀಣ ಉದ್ಯಾನವನ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು ಸಾರ್ವಜನಿಕರ ಉಪಯೋಗಕ್ಕೆ ವಾಕಿಂಗ್ ಪಾತ್ ಮಾಡಲಾಗಿದೆ. ಗ್ರಾ.ಪಂ. ಆವರಣದಲ್ಲಿ ಡಿಜಿಟಲ್ ಲೈಬ್ರರಿ ಸ್ಥಾಪಿಸಿದ್ದು ಅದರಲ್ಲಿ ಸದ್ಯಕ್ಕೆ 1 ಕಂಪ್ಯೂಟರ್, 4 ಮೊಬೈಲ್ ಫೋನ್, 1 ಟಿವಿ ಇದೆ. ವಿದ್ಯಾರ್ಥಿಗಳು, ಗ್ರಾಮಸ್ಥರು ಅದರ ಪ್ರಯೋಜನ ಪಡೆಯುತ್ತಿದ್ದಾರೆ.
 ಗ್ರಾ.ಪಂ. ಕಟ್ಟಡದ ಮೇಲೆ ಸೌರಶಕ್ತಿ ಉತ್ಪಾದನಾ ಘಟಕಗಳನ್ನು ಅಳವಡಿಸಲಾಗಿದ್ದು 3 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದರಿಂದಾಗಿ ವಿದ್ಯುತ್ ಬಿಲ್ ಉಳಿತಾಯವಾಗುತ್ತಿದೆ. ಇನ್ನುಳಿದ ವಿದ್ಯುಚ್ಛಕ್ತಿಯನ್ನು ಮಾರಾಟ ಮಾಡುವುದಕ್ಕೂ ಗ್ರಾ.ಪಂ. ಚಿಂತನೆ ನಡೆಸಿದೆ.
 ಗ್ರಾ.ಪಂ. ವ್ಯಾಪ್ತಿಯ 3 ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನೀರು ಪೂರೈಸಲಾಗುತ್ತಿದೆ. ಸ್ಮಶಾನಗಳ ಅಭಿವೃದ್ಧಿಗೂ ಒತ್ತು ಕೊಡಲಾಗಿದೆ. ಆರೋಗ್ಯ ಶಿಬಿರಗಳಾಗಿವೆ.
 ...
 (ಕೋಟ್)
 ನಮ್ಮ ಗ್ರಾ.ಪಂ. ಆರ್ಥಿಕವಾಗಿ ಅಷ್ಟೇನೂ ಸಬಲವಾಗಿಲ್ಲ. ವಾಣಿಜ್ಯ ಸಂಕೀರ್ಣ ಅಥವಾ ಕೈಗಾರಿಕೆಗಳಿಲ್ಲ. ಸರ್ಕಾರಿ ಗೋಮಾಳಗಳು ಒತ್ತುವರಿಯಾಗದಂತೆ ತಡೆದು ಅವುಗಳನ್ನು ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ಮಾಡಲು ಆದ್ಯತೆ ನೀಡಿದ್ದೇವೆ.
  ಆರ್. ಅಶ್ವಿನಿ, ಮುದಹದಡಿ ಗ್ರಾ.ಪಂ. ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net