

ದಾವಣಗೆರೆ : ನಗರದ ಎಸ್.ಕೆ.ಪಿ. ರಸ್ತೆಯ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಬುಧವಾರ, ವಾಸವಿ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ದೇವಿಯನ್ನು ಆರಾಧಿಸುವ ಜತೆಗೆ ಆರ್ಯವೈಶ್ಯ ಸಮಾಜದ ಹೆಣ್ಣು ಮಕ್ಕಳು ಸಿಂಧೂರ ನೀಡುವ ಮೂಲಕ ದೇಶಪ್ರೇಮವನ್ನೂ ಮೆರೆದರು. ‘ಆಪರೇಷನ್ ಸಿಂಧೂರ’ದಲ್ಲಿ ಪಾಲ್ಗೊಂಡ ಭಾರತೀಯ ಸೈನಿಕರಿಗೆ ಬೆಂಬಲ ಸೂಚಿಸಿದರು. ಮಹಿಳೆಯರು ಕುಂಕುಮ ಹಚ್ಚಿದ ಹಸ್ತವನ್ನು ಬಿಳಿ ವಸ್ತ್ರದ ಮೇಲೆ ಇಟ್ಟು, ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಸಂದೇಶ ರವಾನಿಸಿದರು. ಈ ಸಂದರ್ಭದಲ್ಲಿ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ ಆರ್.ಎಲ್. ಪ್ರಭಾಕರ್ ಮಾತನಾಡಿ, ನೂರಾರು ವರ್ಷಗಳಿಂದ ಶ್ರೀ ಕನ್ಯಕಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ವಾಸವಿ ಜಯಂತಿ ಆಚರಿಸುತ್ತಿದ್ದು, ಈ ವರ್ಷದ ಆಚರಣೆ ವಿಭಿನ್ನವಾಗಿದೆ ಎಂದು ತಿಳಿಸಿದರು. ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ ಎಂದು ಪ್ರಧಾನಿ ನರೇಂದ್ರ ಮೋದಿ ಕರೆದಿದ್ದಾರೆ. ಈ ಸನ್ನಿವೇಶದಲ್ಲಿ ನಮ್ಮ ಆರ್ಯ ವೈಶ್ಯ ಸಮಾಜದ ಹೆಣ್ಣು ಮಕ್ಕಳು ಸಿಂಧೂರವನ್ನು ಕೊಡುವುದರ ಮೂಲಕ ನಾವೂ ನಿಮ್ಮೊಂದಿಗೆ ಇರುತ್ತೇವೆ ಎಂಬ ಸಂದೇಶವನ್ನು ಕೊಟ್ಟಿದ್ದಾರೆ ಎಂದರು. ದೇಶದ ರೈತರ, ಸೈನಿಕರ, ಪ್ರಜೆಗಳ ರಕ್ಷಣೆಗಾಗಿ ನಾವಿದ್ದೇವೆ ಎಂಬ ಸಂಕಲ್ಪವನ್ನೂ ಮಾಡಲಾಯಿತು. ದೇವಸ್ಥಾನ ಸಂಘದ ಆಜೀವ ಗೌರವಾಧ್ಯಕ್ಷ ಆರ್.ಜಿ. ನಾಗೇಂದ್ರ ಪ್ರಕಾಶ್ ಮಾತನಾಡಿ, ಈ ಸಿಂಧೂರದ ವಿಶೇಷತೆ ಎಂದರೆ ದೇಶದ ಸೈನಿಕರಿಗೆ, ಜನತೆಗೆ, ಹೆಣ್ಣು ಮಕ್ಕಳಿಗೆ, ಎಲ್ಲರಿಗೂ ನಾವೂ ನಿಮ್ಮೊಂದಿಗೆ ಗಟ್ಟಿಯಾಗಿ ನಿಂತಿದ್ದೇವೆ. ಸಹಕಾರ ನೀಡುತ್ತೇವೆ. ಮುಂದೆ ನಾವು ನಮ್ಮ ದೇಶಕ್ಕಾಗಿ ಜೀವವನ್ನು ತ್ಯಾಗ ಮಾಡಲೂ ಸಿದ್ಧ ಎಂದರು. ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನ ಸಂಘ, ಶ್ರೀ ವಾಸವಿ ಯುವಜನ ಸಂಘ, ಶ್ರೀ ವಾಸವಿ ಯುವತಿಯರ ಸಂಘ, ಶ್ರೀ ವಾಸವಿ ಭಜನಾ ಸಂಘ ಇತರೆ ಸಂಘಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘದ ಕಾರ್ಯಾಧ್ಯಕ್ಷ ಕಾಸಲ್ ಎಸ್.ಸತೀಶ, ಕಾರ್ಯದರ್ಶಿ ಜೆ.ರವೀಂದ್ರ ಗುಪ್ತ, ಸಹ ಕಾರ್ಯದರ್ಶಿ ಎ.ಎಸ್.ಸತ್ಯನಾರಾಯಣ ಸ್ವಾಮಿ, ಖಜಾಂಚಿ ಎಂ.ಕೆ.ನಾಗೇಂದ್ರ ಕುಮಾರ್, ಶ್ರೀ ವಾಸವಿ ಯುವಜನ ಸಂಘ, ಶ್ರೀ ವಾಸವಿ ಯುವತಿಯರ ಸಂಘ, ಶ್ರೀ ವಾಸವಿ ಭಜನಾ ಸಂಘ, ವಾಸವಿ ಕ್ಲಬ್ ಇಂಟರ್‌ನ್ಯಾಷನಲ್ ದೇವನಗರಿ, ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಸಮಾಜದವರು ಇದ್ದರು.