

ದಾವಣಗೆರೆ : ಶ್ರಾವಣ ಮಾಸದಲ್ಲಿ ವಿಶೇಷವಾದ ವರಮಹಾಲಕ್ಷ್ಮೀ ಹಬ್ಬವನ್ನು ಜಿಲ್ಲಾದ್ಯಂತ ಶುಕ್ರವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಮನೆ ಮನೆಗಳಲ್ಲಿ ದೇವಿಯ ಆರಾಧನೆ ನಡೆಯಿತು. ವಿಶೇಷ ಅಲಂಕಾರ, ಪೂಜೆ, ಹಾಡುಗಳು ಮೇಳೈಸಿದ್ದವು. ಅವರವರ ಸಂಪ್ರದಾಯದಂತೆ ಹಬ್ಬವನ್ನು ಆಚರಿಸಿ ವರ ನೀಡುವಂತೆ ಪ್ರಾರ್ಥಿಸಲಾಯಿತು.
ಬೆಳಗ್ಗೆಯಿಂದಲೇ ಪೂಜೆಗೆ ಬೇಕಾದ ಅಲಂಕಾರ, ಸಿದ್ಧತೆಗಳು ನಡೆದವು. ಹಸಿರು ತೋರಣ, ಬಾಳೆ ಕಂದುಗಳನ್ನು ಕಟ್ಟಿ ಮಂಟಪವನ್ನು ಸಿಂಗರಿಸಲಾಯಿತು. ಸೀರೆ ಉಡಿಸಿ, ಬೆಳ್ಳಿಯಿಂದ ತಯಾರಿಸಿದ ದೇವಿಯ ಮುಖ, ಕಿರೀಟ, ಆಭರಣಗಳನ್ನು ಹಾಕಿದ್ದರು. ಕೆಲವರು ಮೇಣದಿಂದ ಮಾಡಿದ ಮುಖವನ್ನು ಇಟ್ಟಿದ್ದರು. ಕಮಲ, ಸೇವಂತಿಗೆ ಮುಂತಾದ ಹೂವುಗಳನ್ನು ಪೂಜೆಗೆ ಬಳಸಲಾಯಿತು.
ತುಳಸಿಕಟ್ಟೆಯಿಂದ ದೇವರ ಮನೆಯ ವರೆಗೆ ದೇವಿಯನ್ನು ಕರೆತಂದು ಆವಾಹನೆ ಮಾಡಲಾಯಿತು. ಆರತಿ ಮಾಡಿ ಹಾಡುಗಳನ್ನು ಹೇಳಲಾಯಿತು. ವರವ ಕೊಡೇ ತಾಯಿ ವರವ ಕೊಡೇ ಎಂದು ಪ್ರಾರ್ಥಿಸಲಾಯಿತು. ಪಂಚ ಫಲಗಳು, ವಿಶೇಷ ಭಕ್ಷೃಗಳನ್ನು ನೈವೇದ್ಯಕ್ಕೆ ಇಡಲಾಯಿತು. ಪದ್ಧತಿಯಂತೆ ಮರದ ಬಾಗಿನ ಕೊಡಲಾಯಿತು. ಹಬ್ಬದ ವಿಶೇಷವಾಗಿ ಸಿಹಿ ಅಡುಗೆ ತಯಾರಿಸಲಾಗಿತ್ತು.
ಸಂಜೆ ಸುಮಂಗಲೆಯರನ್ನು ಕರೆದು ಅರಿಷಿಣ, ಕುಂಕುಮ ನೀಡಲಾಯಿತು. ಲಕ್ಷ್ಮೀ ಶೋಭಾನೆ ಪದಗಳನ್ನು ಹೇಳಲಾಯಿತು. ಹಬ್ಬದ ಸಂಭ್ರಮ ಮನೆ ಮಾಡಿತ್ತು.
ಇದು ಶ್ರಾವಣ ಮಾಸದಲ್ಲಿ ಬರುವ ವಿಶೇಷ ಹಬ್ಬವಾಗಿದೆ. ಲಕ್ಷ್ಮಿಯನ್ನು ಆರಾಧಿಸಿದರೆ ಆಕೆ ವರ ನೀಡುತ್ತಾಳೆ ಎಂಬ ಭಾವನೆಯಿದೆ. ರುದ್ರ ದೇವರು ಪಾರ್ವತಿ ದೇವಿಗೆ ವರ ಮಹಾಲಕ್ಷ್ಮೀ ವ್ರತವನ್ನು ಉಪದೇಶ ಮಾಡಿದ್ದಾಗಿ ಭವಿಷ್ಯೋತ್ತರ ಪುರಾಣದಲ್ಲಿ ಹೇಳಲಾಗಿದೆ. ಈ ಪೂಜೆಯನ್ನು 16 ವರ್ಷ ಮಾಡುವುದರಿಂದ ವಿಶೇಷ ಫಲ ದೊರೆಯುತ್ತದೆ. ಎಲ್ಲ ಬಗೆಯ ಸಂಪತ್ತು ಪ್ರಾಪ್ತಿಯಾಗುತ್ತದೆ ಎಂದು ಸಂಸ್ಕೃತ ಅಧ್ಯಾಪಕ ಕೃಷ್ಣಾಚಾರ್ ಮಣ್ಣೂರ್ ತಿಳಿಸಿದರು.